ತೀರ್ಥಹಳ್ಳಿ: ಇಲ್ಲಿನ ರಾಮಚಂದ್ರಪುರ ಮಠದ ಹಿಂಭಾಗದ ತುಂಗಾ ನದಿಯ ದಡದಲ್ಲಿ ಪುರಾತನ ಬಂಡೆ ಶಾಸನವೊಂದು ಪತ್ತೆಯಾಗಿದೆ.
60 ಅಡಿಯ ಉದ್ದ, 25 ಅಡಿ ಎತ್ತರದ ಬಂಡೆಯ ಮೇಲೆ ಶಾಸನವನ್ನು ಕೆತ್ತಲಾಗಿದೆ. ಇಲ್ಲಿ ಬ್ರಹ್ಮ, ಚೌಡಿ, ನಾಗರಕಲ್ಲು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ಶಾಸನ ಕೊರೆದ ಜಾಗದಿಂದ 10 ಅಡಿ ದೂರದಲ್ಲಿ 3 ಇಂಚು ಆಳ, 2 ಅಡಿ ಅಗಲ ಹಾಗೂ 4 ಅಡಿ ಉದ್ದವಾಗಿ ಬಂಡೆಯನ್ನು ಆಯತಾಕಾರದ ಕಿಟಕಿಯಂತೆ ಕೊರೆಯಲಾಗಿದೆ.
ಇದರ ಮೇಲ್ಭಾಗದಲ್ಲಿ ದ್ಯಾನಸ್ಥನಾಗಿ ಕುಳಿತ ಸ್ಥಿತಿಯಲ್ಲಿರುವ ಮುಕ್ಕೊಡೆ ಸಹಿತ ತೀರ್ಥಂಕರನ ರೇಖಾಚಿತ್ರ ಬಿಡಿಸಲಾಗಿದೆ. 400 ಮೀಟರ್ ದೂರದಲ್ಲಿ ತುಂಗಾನದಿಯ ಕೊರೆತದಿಂದ ಉಂಟಾದ ಚಿಕ್ಕ ಕುಳಿಗಳಲ್ಲಿ ಜೈನ ತೀರ್ಥಂಕರರ ರೇಖಾಚಿತ್ರಗಳು ಇವೆ. ಇದು ಹಿಂದೆ ಜೈನ ತೀರ್ಥಕ್ಷೇತ್ರವಾಗಿತ್ತು.
ಹುಟ್ಟುಬಂಡೆಯ ಮೇಲಿರುವ ಶಾಸನ 16ನೇ ಶತಮಾನದ ಕನ್ನಡ ಲಿಪಿಯಲ್ಲಿದೆ. ಹಸು, ಕರು, ಸೂರ್ಯ, ಚಂದ್ರ ಮತ್ತು ಕತ್ತಿಯನ್ನು ಉಬ್ಬುಶಿಲ್ಪದಲ್ಲಿ ಕೆತ್ತಲಾಗಿದೆ. 27 ಸಾಲುಗಳಲ್ಲಿ ಶಾಸನ ಕೆತ್ತಲಾಗಿದೆ. ಮೊದಲ ಸಾಲಿನಲ್ಲಿ ಪ್ರಾರ್ಥನಾ ಶ್ಲೋಕ, ನಂತರದ 5 ಸಾಲುಗಳು ಸಂಪೂರ್ಣವಾಗಿ ಸವೆದಿವೆ. ಶಾಸನವು ಪ್ರಮುಖವಾಗಿ ವಿಶ್ವೇಶ್ವರ ದೇವರ ಪೂಜಾ ಕೈಂಕರ್ಯಗಳಿಗೆ ದಾನ ನೀಡಿದ್ದಾಗಿದೆ. ದಾನವನ್ನು ಮಲೆಯಾಳ ಪರಂಪರೆಯ ದೇವೇಂದ್ರಪುರಿ ಯತಿಗಳ ಮುಖಾಂತರ ನೀಡಿದ್ದಾಗಿದೆ.
ಇಲ್ಲಿ ಆಡಳಿತ ನಡೆಸುತ್ತಿದ್ದ ವಿಟಂಣ ವೊಡೆಯರ ಅಂಣ ವೀರಗಂಗರಸಂಣ ವೊಡೆಯರು ದಾನ ನೀಡಿರುವುದು ತಿಳಿಯುತ್ತದೆ. ಆ ಪ್ರದೇಶದ ಅಧಿಕಾರಿಯಾದ ಚಉಡಪ್ಪ ಎಂಬುವನು ದಾನ ನೀಡಿದ್ದು ತಿಳಿಯುತ್ತದೆ. ದಾನವು ವಿಶ್ವೇಶ್ವರ ದೇವರ ಅಮೃತಪಡಿಗೆ, ಪಾರಣೆಗೆ ಮತ್ತು ಉಪಹಾರಗಳ ಸದ್ವಿನಿಯೋಗಕ್ಕಾಗಿ ನೀಡಿರುವುದು ತಿಳಿಯುತ್ತದೆ. ಇದು ಕ್ರಿ.ಶ. 1578ನೇ ಸಾಲಿನದ್ದು ಎಂದು ಸುಳುಗೋಡು ಗ್ರಾಮದ ಶಾಸನ ತಜ್ಞ ಪ್ರೊ.ಜಿ.ಕೆ.ದೇವರಾಜಸ್ವಾಮಿ ಅಧ್ಯಯನ ಮಾಡಿ ಗುರುತಿಸಿದ್ದಾರೆ.
ಶಾಸನ ಅಧ್ಯಯನಕ್ಕೆ ಪತ್ರಕರ್ತ ಜಿ.ಆರ್. ಸತ್ಯನಾರಾಯಣ, ಶಿಕ್ಷಕ ಎಲ್.ಎಸ್.ರಾಘವೇಂದ್ರ, ಜಿ.ಎನ್. ಸಾತ್ವಿಕ್ ಸಹಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.