ADVERTISEMENT

ಕುಪ್ಪಳಿ | ಹಸಿವು ನೀಗಿಸಲು ಇಲ್ಲ ಕ್ಯಾಂಟೀನ್‌

ನಿರಂಜನ ವಿ.
Published 19 ನವೆಂಬರ್ 2023, 6:26 IST
Last Updated 19 ನವೆಂಬರ್ 2023, 6:26 IST
ಕುಪ್ಪಳಿಯಲ್ಲಿ ಮೂರು ತಿಂಗಳಿಂದ ಮುಚ್ಚಿರುವ ಕ್ಯಾಂಟೀನ್
ಕುಪ್ಪಳಿಯಲ್ಲಿ ಮೂರು ತಿಂಗಳಿಂದ ಮುಚ್ಚಿರುವ ಕ್ಯಾಂಟೀನ್   

ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ ವೀಕ್ಷಣೆಗೆ ಬರುವ ಪ್ರವಾಸಿಗರ ಹಸಿವು, ನೀರಡಿಗೆ ನೀಗಿಸುತ್ತಿದ್ದ ಕುಪ್ಪಳಿಯ ಕ್ಯಾಂಟೀನ್‌ ಬಂದ್‌ ಆಗಿದೆ. ಸುತ್ತಮುತ್ತ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕುವೆಂಪು ಹುಟ್ಟಿಬೆಳೆದ ಜಾಗ ನೋಡಲು ನಿತ್ಯ ನೂರಾರು ಪ್ರವಾಸಿಗರು ನೇರವಾಗಿ ಬಸ್‌ನಲ್ಲಿ ಬಂದಿಳಿಯುತ್ತಾರೆ. ಸುತ್ತಮುತ್ತಲ 5 ಕಿ.ಮೀ. ಅಂತರದಲ್ಲಿ ಯಾವುದೇ ಕ್ಯಾಂಟೀನ್‌, ಹೋಟೆಲ್‌ ಇಲ್ಲದ ಕಾರಣ ಅನೇಕರು ಅವ್ಯವಸ್ಥೆಗೆ ಶಪಿಸುವಂತಾಗಿದೆ.

ಪೂರ್ಣ ಪ್ರಮಾಣದಲ್ಲಿ ಕುಪ್ಪಳಿಯ ಸೌಂದರ್ಯ ಸವಿಯಲು ಸುಮಾರು 4ರಿಂದ 5 ಗಂಟೆಯ ಅವಧಿ ಬೇಕಾಗುತ್ತದೆ. ಕವಿಮನೆಯಿಂದ ನೇರವಾಗಿ ಅಪರೂಪಕ್ಕೆ ಚಾರಣ ಬೆಳೆಸಿದವರು ನೀರೂ ಸಿಗದೆ ಅರೆಜೀವವಾಗಿ ಬಿಡುತ್ತಾರೆ. ಗ್ಯಾಸ್ಟ್ರಿಕ್‌, ಮಧುಮೇಹ ಸೇರಿದಂತೆ ಇತರ ಆರೋಗ್ಯ ಸಮಸ್ಯೆಯಿಂದ ಬಳಲುವ ಕೆಲವು ಪ್ರವಾಸಿಗರು ತೊಂದರೆಗೆ ಸಿಲುಕಿದ್ದಾರೆ.

ADVERTISEMENT
ಹಸಿವಿನ ಉಪಶಮನಕ್ಕೆ ಉಪಾಹಾರ ಮಂದಿರದ ಅಗತ್ಯ ಇದೆ. ಕ್ಯಾಂಟೀನ್‌ ಮುಚ್ಚಿದ್ದರಿಂದ ಕುಪ್ಪಳಿಯ ಪರಿಸರ ವೀಕ್ಷಣೆಯ ಖುಷಿ ಮರೆಯಾಗಿದೆ. ಹಸಿವು ಆರೋಗ್ಯ ಸಮಸ್ಯೆ ಹೆಚ್ಚಿಸುವ ಆತಂಕದಿಂದ ಪ್ರವಾಸಿಗರು ಪರಿಪೂರ್ಣವಾಗಿ ಪರಿಸರ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ.
ಕೆ.ನಂಜುಡರಾವ್, ಪ್ರವಾಸಿ ಬೆಂಗಳೂರು

ಸುಮಾರು 19 ವರ್ಷಗಳಿಂದ ಪ್ರತಿಷ್ಠಾನದಿಂದಲೇ ಕಾರ್ಯ ನಿರ್ವಹಿಸುತ್ತಿದ್ದ ಅನುತ್ತರ ಕ್ಯಾಟೀನ್‌ ಅನ್ನು ಮುಚ್ಚಲಾಗಿದೆ. ಕುಡಿಯುವ ನೀರು, ಕಾಫಿ, ಟೀ, ಊಟ, ತಿಂಡಿ, ಚಾಕೊಲೇಟ್‌, ಬಿಸ್ಕಂತ್‌ನಂತಹ ತಿನಿಸುಗಳು ಇಲ್ಲಿ ಸಿಗುತ್ತಿದ್ದರಿಂದ ಪ್ರವಾಸಿಗರು ನಿರಾಯಾಸವಾಗಿ ಒಂದು ದಿನ ಕಳೆಯುವ ಅವಕಾಶ ಲಭಿಸುತ್ತಿತ್ತು.

ಸ್ವಚ್ಛತೆಗೆ ಧಕ್ಕೆ

‘ಕುಪ್ಪಳಿ ಮನೆಯ ಮುಂಭಾಗದಲ್ಲೇ ಕ್ಯಾಂಟೀನ್‌ ಇದ್ದುದರಿಂದ ಪ್ರವಾಸಿಗರಿಗೆ ಅನುಕೂಲವಾಗಿತ್ತು. ಅಲ್ಲದೇ ಸ್ಥಳೀಯವಾಗಿಯೇ ಸೌಲಭ್ಯ ಲಭ್ಯವಾದ ಕಾರಣ ಹೊರಗಿನಿಂದ ತಿಂಡಿ, ತಿನಿಸುಗಳನ್ನು ತರುವ ಗೋಜು ಇರಲಿಲ್ಲ. ಕ್ಯಾಂಟೀನ್‌ ಮುಚ್ಚಿ 3 ತಿಂಗಳಾಗಿದ್ದು, ಹೊರಗಿನಿಂದ ತಿನಿಸು ತರುವ ಅನಿವಾರ್ಯ ಪ್ರವಾಸಿಗರದ್ದು. ಹೀಗಾಗಿ ಪ್ರವಾಸಿಗರು ಅಲ್ಲಲ್ಲಿ ಕುಳಿತು ತಿನಿಸುಗಳನ್ನು ಸೇವಿಸುತ್ತಿದ್ದು, ಪ್ಲಾಸ್ಟಿಕ್ ಬ್ಯಾಗ್‌ ಸೇರಿ ಇತರೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದು ಅರಣ್ಯ ಪ್ರದೇಶವನ್ನು ಸೇರುತ್ತಿದೆ. ಇದು ಸುತ್ತಮುತ್ತಲ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ’ ಎಂದು ಸ್ಥಳೀಯ ನಿವಾಸಿ ಅಭಿಷೇಕ್‌ ಆಚಾರ್ಯ ದೂರುತ್ತಾರೆ.

ಉಸ್ತುವಾರಿ ಸಚಿವರ ಪತ್ರಕ್ಕಿಲ್ಲ ಬೆಲೆ

‘ಈಚೆಗೆ ನಡೆದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಭೆಯಲ್ಲಿ ಕ್ಯಾಂಟೀನ್‌ ಮುಚ್ಚುವ ಬಗ್ಗೆ ನಿರ್ಣಯ ತೆಗೆದುಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಪ್ರವಾಸಿಗರ ಊಟೋಪಚಾರದ ವ್ಯವಸ್ಥೆಗೆ ಈ ಕ್ಯಾಂಟೀನ್‌ ಬಿಟ್ಟರೆ ಪರ್ಯಾಯ ವ್ಯವಸ್ಥೆ ಇಲ್ಲ. ಬದಲಿ ವ್ಯವಸ್ಥೆ ಆಗುವವರೆಗೆ ಯಥಾಸ್ಥಿತಿ ಮುಂದುವರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರತಿಷ್ಠಾನದ ಕಾರ್ಯದರ್ಶಿಯೂ ಆಗಿರುವ ಎಸ್.ಮಧು ಬಂಗಾರಪ್ಪ ಜಿಲ್ಲಾಧಿಕಾರಿಗೆ ಅಕ್ಟೋಬರ್‌‌ 31ರಂದು ಪತ್ರ ಬರೆದು ಸೂಚಿಸಿದ್ದಾರೆ. ಆದರೂ ಈವರೆಗೆ ಕ್ಯಾಂಟೀನ್‌ ಬಾಗಿಲು ತೆರೆದಿಲ್ಲ.

ಕುಪ್ಪಳಿಯಲ್ಲಿ ಕಳೆದ ಮೂರು ತಿಂಗಳಿಂದ ಮುಚ್ಚಿರುವ ಕ್ಯಾಂಟೀನ್
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.