ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿಯ ತುಂಗಾ ಜಲಾಶಯದ ಒಳ ಹರಿವಿನ ನೋಟ
ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರು ಪೂರ್ವ ಮಳೆಗೆ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಭಾನುವಾರ ಜಲಾಶಯದ ಪವರ್ ಹೌಸ್ ಮೂಲಕ 2,000 ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ.
3.24 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಇದ್ದು, ಸಂಪೂರ್ಣ (584.24 ಮೀಟರ್) ಭರ್ತಿಯಾಗಿದೆ. ಜಲಾಶಯಕ್ಕೆ ಒಳಹರಿವು 2,265 ಕ್ಯುಸೆಕ್ ಇದ್ದು, ಮಳೆಯ ಪ್ರಮಾಣ ಹೆಚ್ಚಿದರೆ, ಜಲಾಶಯದ ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹರಿಸಲಾಗುವುದು. ನದಿ ಪಾತ್ರದ ಜನರು ಎಚ್ಚರದಿಂದಿರಬೇಕು ಎಂದು ತುಂಗಾ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ತಿಪ್ಪಾನಾಯ್ಕ ‘ಪ್ರಜಾವಾಣಿ’ ಗೆ ತಿಳಿಸಿದರು.
ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮಲೆನಾಡಿನ ನಡುಮನೆ ಹೊಸನಗರದಲ್ಲಿ ಭಾರಿ ಮಳೆಯಾಗುತ್ತಿದೆ. ತೀರ್ಥಹಳ್ಳಿ, ಸಾಗರ ತಾಲ್ಲೂಕುಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಗೆ ಯಲ್ಲೋ ಅಲರ್ಟ್ ಪ್ರಕಟಿಸಿದೆ. ಬೆಳಗ್ಗೆ 8.30 ರಿಂದ 10.30ರವರೆಗೆ ಜಿಲ್ಲೆಯಲ್ಲಿ ಸರಾಸರಿ 6.5 ಮಿ.ಮೀ ಮಳೆಯಾಗಿದೆ ಎಂದು ಅಂದಾಜಿಸಿದೆ. ಇನ್ನು, ಜಿಲ್ಲೆಯಲ್ಲಿ ಇಡೀ ದಿನ ಮಳೆಯಾಗುವ ಸಾಧ್ಯತೆ ಇದೆ.
ಲಿಂಗನಮಕ್ಕಿಗೆ ಒಳಹರಿವು ಏರಿಕೆ:
ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. 10,954 ಕ್ಯೂಸೆಕ್ ಒಳ ಹರಿವು ಇದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 0.35 ಅಡಿಗಳಷ್ಟು ಏರಿಕೆಯಾಗಿದೆ. ಜಲಾಶಯದ ನೀರಿನ ಮಟ್ಟ 1819 ಅಡಿ. ಭಾನುವಾರ ನೀರಿನ ಮಟ್ಟ 1764 ಅಡಿಗೆ ತಲುಪಿದೆ.
ಭದ್ರಾ ನದಿಗೆ ಒಳಹರಿವು ಇನ್ನೂ ಸಣ್ಣ ಪ್ರಮಾಣದಲ್ಲಿದೆ. 186 ಅಡಿ ಸಾಮರ್ಥ್ಯದ ಭದ್ರಾ ಜಲಾಶಯದಲ್ಲಿ 136 ಅಡಿ ನೀರು ಸಂಗ್ರಹವಾಗಿದೆ.
ಹೊಸನಗರದಲ್ಲಿ ಮಳೆ ಅಬ್ಬರ:
ಹೊಸನಗರ ತಾಲ್ಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ತಾಲ್ಲೂಕಿನ ವಿವಿಧೆಡೆ ನಿರಂತರ ಮಳೆ ಸುರಿದಿದೆ. ಮಾಣಿ ವ್ಯಾಪ್ತಿಯಲ್ಲಿ 129 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 100 ಮಿ.ಮೀ, ಹುಲಿಕಲ್‌ನಲ್ಲಿ 179 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 154 ಮಿ.ಮೀ, ಚಕ್ರಾ 197 ಮಿ.ಮೀ, ಸಾವೇಹಕ್ಲು 184 ಮಿ.ಮೀ ಮಳೆಯಾಗಿದೆ.
ಜಿಲ್ಲೆಯಲ್ಲಿ ಇನ್ನೆರಡು ದಿನ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮೇ 26 ಮತ್ತು 27ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮೇ 28 ಮತ್ತು 29ರಂದು ಆರೆಂಜ್ ಅಲರ್ಟ್ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.