
ಶಿಕಾರಿಪುರ: ತಾಲ್ಲೂಕಿನ ಹಿರೇಜಂಬೂರು ಗ್ರಾಮದ ಪ್ರಭಣ್ಣ ಕೊಂಡೇರ ಕೃಷಿ ಜಮೀನಿನಲ್ಲಿ ಶುಕ್ರವಾರ ಉಳುಮೆ ಮಾಡುವಾಗ 12ನೇ ಶತಮಾನಕ್ಕೆ ಸೇರಿದ ವೀರಗಲ್ಲು ಪತ್ತೆಯಾಗಿದೆ. 150ಸೆ.ಮೀ. ಎತ್ತರ, 9 ಸೆ.ಮೀ. ಅಗಲವಿದ್ದು, ಮೂರು ಹಂತದ ಕೆತ್ತನೆ ಒಳಗೊಂಡಿದೆ.
ಇತಿಹಾಸ ಸಂಶೋಧಕರಾದ ರಮೇಶ ಬಿ. ಹಿರೇಜಂಬೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಗೋವುಗಳು ಮತ್ತು ಸ್ತ್ರೀಯರನ್ನು ರಕ್ಷಿಸಿ ವೀರಮರಣ ಹೊಂದಿದ ವೀರನಿಗೆ ನಿರ್ಮಿಸಿದ ವೀರಗಲ್ಲು ಮೇಲಿನ ಪಟ್ಟಿಕೆಯಲ್ಲಿ ಆರು ಸಾಲಿನ ಶಾಸನ ಪಾಠವಿದ್ದು, ಕಳಚೂರಿಯ ಚಕ್ರವರ್ತಿ ಬಿಜ್ಜಳ ದೇವನ ಆಡಳಿತ ಅವಧಿಯಲ್ಲಿ ಉದ್ದರೆಯ ಊರಿನವರು ಅಗ್ರಹಾರ ಜಂಬೂರಿನ ಮೇಲೆ ದಾಳಿ ಮಾಡಿ ಜಂಬೂರಿನ ತುರು (ಧನ) ಮತ್ತು ಹೆಂಗಸರನ್ನು ಅಪಹರಿಸಲು ಮುಂದಾಗುವರು. ಆಗ ಜಂಬೂರಿನ ಸಾಸಿರ್ವರು ಕುಂಬಾರ ಬಮ್ಮನ ಮಗನಾದ ಬೀರನಿಗೆ ಅದನ್ನು ತಡೆಯಲು ಸೂಚಿಸುವರು. ಬೀರನು ವೀರಾವೇಶದಿ ಹೋರಾಡಿ ಗ್ರಾಮದ ಗೋವು ಮತ್ತು ಸ್ತ್ರೀಯರನ್ನು ರಕ್ಷಿಸಿ ವೀರಮರಣ ಹೊಂದುವನು. ಅವನ ನೆನಪಿಗಾಗಿ ಈ ವೀರಗಲ್ಲನ್ನು ನಿಲ್ಲಿಸಲಾಗಿತ್ತು.
ಕೆಳಗಿನ ಪಟ್ಟಿಕೆಯಲ್ಲಿ ವೀರನು ವೈರಿಗಳೊಡನೆ ಹೋರಾಡುತ್ತಿರುವ ಕೆತ್ತನೆಯಿದ್ದು, ವೀರನ ಹಿಂದೆ ಗೋವುಗಳ ಚಿತ್ರಣ ಇದೆ. ಎರಡನೇ ಪಟ್ಟಿಕೆಯಲ್ಲಿ ಮಡಿದ ವೀರನನ್ನು ಸುರಾಂಗನೆಯರು ಸ್ವರ್ಗಕ್ಕೆ ಕರೆದೊಯ್ಯುವ ಚಿತ್ರಣವಿದೆ. ಮೇಲಿನ ಪಟ್ಟಿಕೆಯಲ್ಲಿ ಮಡಿದ ವೀರನು ದೇವಲೋಕದಲ್ಲಿ ಕುಳಿತ ಕೆತ್ತನೆಯಿದೆ. ವೀರಗಲ್ಲಿನ ಎಡಭಾಗದಲ್ಲಿ ಕುಂಬಾರ ವೃತ್ತಿಯ ಚಕ್ರ ಮಡಿಕೆ ಮತ್ತು ದಂಡಗಳ ಚಿನ್ನೆಗಳನ್ನು ಕೊರೆಯಲಾಗಿದೆ. ದೊರೆತ ವೀರಗಲ್ಲನ್ನು ಪ್ರಭಣ್ಣ ಕೊಂಡೇರ ಹಾಗೂ ಅವರ ಮಕ್ಕಳು ವ್ಯವಸ್ಥಿತವಾಗಿ ನಿಲ್ಲಿಸಿ ಅದನ್ನು ಸ್ಥಳದಲ್ಲಿಯೇ ರಕ್ಷಿಸಿ ಐತಿಹಾಸಿಕ ಪ್ರಜ್ಞೆ ಮೆರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.