ADVERTISEMENT

ನಗರ ಪಾಲಿಕೆ ಚುನಾವಣೆ: ಶಿವಮೊಗ್ಗ ನಗರ ಪಾಲಿಕೆ ಗದ್ದುಗೆ ಯಾರಿಗೆ?

ಬಿಜೆಪಿ– ಕಾಂಗ್ರೆಸ್‌ಗೆ ಅಧಿಪತ್ಯ ಸ್ಥಾಪನೆಯ ವಿಶ್ವಾಸ, ಜೆಡಿಎಸ್‌ಗೆ ಮತ್ತೊಮ್ಮೆ ಕಿಂಗ್ ಮೇಕರ್ ಕನಸು

ಚಂದ್ರಹಾಸ ಹಿರೇಮಳಲಿ
Published 1 ಸೆಪ್ಟೆಂಬರ್ 2018, 13:46 IST
Last Updated 1 ಸೆಪ್ಟೆಂಬರ್ 2018, 13:46 IST
ಎಸ್‌. ರುದ್ರೇಗೌಡ
ಎಸ್‌. ರುದ್ರೇಗೌಡ   

ಶಿವಮೊಗ್ಗ:ನಗರ ಪಾಲಿಕೆ ಚುನಾವಣೆಯ ಫಲಿತಾಂಶ ಸೋಮವಾರ ಮಧ್ಯಾಹ್ನದ ಒಳಗೆ ಪ್ರಕಟವಾಗಲಿದೆ. ಮತದಾನ ಮುಗಿದ ಬೆನ್ನಿಗೆ ಈ ಬಾರಿ ಗದ್ದುಗೆ ಯಾರಿಗೆ ಎಂಬ ಚರ್ಚೆ ಆರಂಭವಾಗವಾಗಿದೆ.

ಮತ್ತೆ ಅಧಿಕಾರ ಹಿಡಿಯುವುದೇ ಕಾಂಗ್ರೆಸ್‌?:ಹಿಂದಿನ ಚುನಾವಣೆಯಲ್ಲಿ ನಿರೀಕ್ಷಿತ ಬಹುಮತ ಪಡೆಯದಿದ್ದರೂ, ಜೆಡಿಎಸ್ ಸಹಕಾರ ಪಡೆದಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತ್ತು. ನಂತರ ರಾಜ್ಯದಲ್ಲಿ ಅದೇ ಪಕ್ಷ ಅಧಿಕಾರಕ್ಕೆ ಬಂದು, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರವೂ ಕಾಂಗ್ರೆಸ್‌ ಪಾಲಾಗಿತ್ತು. ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರ ಪ್ರಯತ್ನದ ಫಲವಾಗಿ ಅಂದಿನ ನಗರಸಭೆ ನಗರ ಪಾಲಿಕೆಯಾಗಿ ಬಡ್ತಿ ಪಡೆಯಿತು. ಈ ಬಾರಿಯೂ ಕಾಂಗ್ರೆಸ್ ಎಲ್ಲ ಸ್ಥಾನಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ, ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಎಸ್‌ಡಿಪಿಐಗೆ ಪ್ರಬಲ ಪೈಪೊಟಿ ನೀಡಿದೆ.ಈ ಬಾರಿ ಪೂರ್ಣ ಬಹುಮತ ಪಡೆದು ಅಧಿಕಾರ ಹಿಡಿಯುವ ತವಕದಲ್ಲಿದೆ.

ಅಧಿಕಾರದ ಆತ್ಮವಿಶ್ವಾಸದಲ್ಲಿ ಬಿಜೆಪಿ:ಕಳೆದ ಬಾರಿ ಕೆಜೆಪಿ ವಿರುದ್ಧ ಸ್ಪರ್ಧಿಸಿ, ಮತ ವಿಭಜನೆ ಪರಿಣಾಮ ಸೋಲು ಕಂಡಿದ್ದ ಬಿಜೆಪಿ ಈ ಬಾರಿ ನಿಚ್ಚಳ ಬಹುಮತ ಪಡೆದು ಪಾಲಿಕೆ ಚುಕ್ಕಾಣಿ ಹಿಡಿಯುವ ಆತ್ಮವಿಶ್ವಾಸದಲ್ಲಿದೆ. ಮೂರು ತಿಂಗಳ ಹಿಂದೆ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ವಿಜೇತರಾಗಿರುವುದು ಆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿತ್ತು. ಅದೇ ವಿಶ್ವಾಸದಲ್ಲಿ ಪಾಲಿಕೆ ಚುನಾವಣೆಯನ್ನೂ ಪಕ್ಷ ಎದುರಿಸಿದೆ. 35 ವಾರ್ಡ್‌ಗಳಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಪ್ರಬಲ ಪೈಪೋಟಿ ನೀಡಿತ್ತು.

ADVERTISEMENT

ಬದಲಾವಣೆಗೆ ನಲುಗಿದ ಜೆಡಿಎಸ್:ಹಿಂದಿನ ನಗರಸಭೆ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಲೆಕ್ಕಾಚಾರ ತಲೆಕೆಳಗೆ ಮಾಡಿ ಐದು ಸ್ಥಾನಗಳಲ್ಲಿ ಗೆಲುವು ಪಡೆದಿದ್ದ ಜೆಡಿಎಸ್ ನಂತರ ನಾಲ್ಕು ಅವಧಿ ಕಾಂಗ್ರೆಸ್, ಒಂದು ಅವಧಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಸತತ ಐದು ವರ್ಷಗಳೂ ಅಧಿಕಾರ ಅನುಭವಿಸಿತ್ತು. ಅಂದಿನ ಚುನಾವಣೆಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎಂ. ಶ್ರೀಕಾಂತ್ ಸತತ ಪರಿಶ್ರಮ ಹಾಕಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ನಾಯಕತ್ವ ಎರಡು ಬಾರಿ ಬದಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎಚ್‌.ಎನ್‌. ನಿರಂಜನ್ ಠೇವಣಿ ಕಳೆದುಕೊಂಡಿದ್ದು ಪಕ್ಷದ ಆತ್ಮಸ್ಥೈರ್ಯಕ್ಕೆ ದೊಡ್ಡ ಪೆಟ್ಟು ನೀಡಿತ್ತು. ಇದು ನಗರ ಪಾಲಿಕೆ ಚುನಾವಣೆಯಲ್ಲೂ ಪ್ರತಿಫಲಿಸಿದೆ. ಪಕ್ಷ ಎಷ್ಟು ಸ್ಥಾನ ಗೆಲ್ಲುತ್ತದೆ ಎನ್ನುವ ಖಚಿತತೆ ಮುಖಂಡರಲ್ಲಿ ಕಾಣುತ್ತಿಲ್ಲ.ಸ್ವಲ್ಪ ಸ್ಥಾನ ಪಡೆದರೂ ಸಾಕು ಮತ್ತೆ ಕಿಂಗ್ ಮೇಕರ್ ಆಗುವ ಲೆಕ್ಕಾಚಾರದಲ್ಲಿ ಜೆಡಿಎಸ್ ಇದೆ.

ಬಿಜೆಪಿಗೆ ನಾಲ್ವರ ಬಲ:35 ಸದಸ್ಯ ಬಲದ ಪಾಲಿಕೆಯಲ್ಲಿ ಸದಸ್ಯರ ಜತೆಗೆ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತದಾನದ ಹಕ್ಕು ಹೊಂದಿರುತ್ತಾರೆ. ಪ್ರಸ್ತುತ ಸಂಸದರ ಸ್ಥಾನ ಖಾಲಿ ಇದೆ. ಒಟ್ಟು ಇಬ್ಬರು ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು ಸೇರಿ ಐವರು ಮತದಾನದ ಹಕ್ಕು ಹೊಂದಿದ್ದಾರೆ. ಅಂದರೆ ಪಾಲಿಕೆ ಪಾಲಿಕೆಯ ಒಟ್ಟು ಬಲ 40, ಬಹುಮತಕ್ಕೆ 21 ಸ್ಥಾನ ಬೇಕಿದೆ.

ಬಿಜೆಪಿಗೆ ಇಬ್ಬರು ಶಾಸಕರು (ಕೆ.ಎಸ್. ಈಶ್ವರಪ್ಪ, ಕೆ.ಬಿ. ಅಶೋಕನಾಯ್ಕ), ಇಬ್ಬರು ವಿಧಾನ ಪರಿಷತ್ ಸದಸ್ಯರು (ಆಯನೂರು ಮಂಜುನಾಥ್, ಎಸ್‌. ರುದ್ರೇಗೌಡ) ಇದ್ದಾರೆ. ಕಾಂಗ್ರೆಸ್‌ಗೆ ಒಬ್ಬರು ವಿಧಾನಸಭಾ ಸದಸ್ಯರ (ಆರ್. ಪ್ರಸನ್ನಕುಮಾರ್) ಬಲವಿದೆ. ಹಾಗಾಗಿ, ಪಾಲಿಕೆಯ ಗದ್ದುಗೆ ಹಿಡಿಯಲು ಬಿಜೆಪಿ ಈ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಗೆದ್ದರೆ ಸಾಕು. ಕಾಂಗ್ರೆಸ್ 20 ಸ್ಥಾನಗಳಲ್ಲಿ ಗೆಲ್ಲಲೇ ಬೇಕು.ಜೆಡಿಎಸ್ 26 ಸ್ಥಾನ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.