ಶಿವಮೊಗ್ಗ: ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆಯ ಶಿವಮೊಗ್ಗ ವನ್ಯಜೀವಿ ವಿಭಾಗದ ವತಿಯಿಂದ ಸಿಬ್ಬಂದಿಗೆ ಶುಕ್ರವಾರ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ನಡೆಯಿತು. ಇದೇ ವೇಳೆ, ಕಳ್ಳಬೇಟೆ ತಡೆ ಶಿಬಿರದಲ್ಲಿ ಕೆಲಸ ನಿರ್ವಹಿಸುವ ಹೊರಗುತ್ತಿಗೆ ನೌಕರರಿಗೆ ಅಂಚೆ ಇಲಾಖೆಯ ಅಪಘಾತ ವಿಮಾ ಸೌಲಭ್ಯವನ್ನು ಒದಗಿಸಲಾಯಿತು.
ಶಿವಮೊಗ್ಗ ವೃತ್ತ ಕಚೇರಿಯ ಶ್ರೀಗಂಧ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸಿಸಿಎಫ್ ಕೆ.ಟಿ.ಹನುಮಂತಪ್ಪ ಉದ್ಘಾಟಿಸಿದರು. ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆರೋಗ್ಯ ತಪಾಸಣೆ: ಕಿವಿ, ಮೂಗು ಹಾಗೂ ಗಂಟಲು ತಜ್ಞ ಶಿಕಾರಿಪುರ ಆಸ್ಪತ್ರೆಯ ಡಾ. ಮಹದೇವ ಪ್ರಸಾದ್, ಸಾಗರದ ಉಪವಿಭಾಗ ಆಸ್ಪತ್ರೆಯ ಡಾ.ಸುಮಾ, ಹೊಳಲೂರು ಆರೋಗ್ಯ ಕೇಂದ್ರದ ದಂತವೈದ್ಯ ಡಾ.ಎಂ.ಸಿ. ಸತೀಶ್, ಶಿವಮೊಗ್ಗದ ನಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಫ್ಯಾಮಿಲಿ ಫಿಜಿಷಿಯನ್ ಡಾ.ನಯನಾ ಹಾಗೂ ಸಹಾಯಕ ಸಿಬ್ಬಂದಿಯು ಆರೋಗ್ಯ ತಪಾಸಣೆ ಮಾಡಿದರು.
145 ಸಿಬ್ಬಂದಿಯ ರಕ್ತದೊತ್ತಡ, ಮಧುಮೇಹ, ಕಣ್ಣು ಕಿವಿ, ಮೂಗು ಹಾಗೂ ದಂತಕ್ಕೆ ಸಂಬಂಧಿಸಿದ ತಪಾಸಣೆ, ಹೃದಯ ಸಂಬಂಧಿ ಪರೀಕ್ಷೆಗಳನ್ನು ನಡೆಸಲಾಯಿತು.
ಅಂಚೆ ಇಲಾಖೆಯಿಂದ ಕಳ್ಳಬೇಟೆ ತಡೆ ಶಿಬಿರದ 75 ನೌಕರರಿಗೆ ತಲಾ ₹10 ಲಕ್ಷ ಕವರೇಜ್ ಉಳ್ಳ ಜೀವನ್ ಸುಂದರಂ ಅಪಘಾತ ವಿಮೆ ಹಾಗೂ ಅಂಚೆ ಇಲಾಖೆಯ ಬ್ಯಾಂಕ್ ಖಾತೆ ಮಾಡಿಸಲಾಯಿತು. ಅಂಚೆ ಬ್ಯಾಂಕ್ ಮ್ಯಾನೇಜರ್ ಜಿತೇಶ್, ಸಿಬ್ಬಂದಿ ಆಶಾರಾಮ್ ಹಾಜರಿದ್ದರು. ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಕಾಲೇಜಿನ ಪ್ರಾಧ್ಯಾಪಕ ಮಹೇಶ್ವರಪ್ಪ ನೇತೃತ್ವದಲ್ಲಿ 40 ಅರಣ್ಯಶಾಸ್ತ್ರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಎಸಿಎಫ್‌ಗಳಾದ ಸಿ.ಬಿ.ಗುರುರಾಜ್, ವಿಜಯಕುಮಾರ್ ಕಾಳಪ್ಪನವರ್, ಸಕ್ರೆಬೈಲು ಆರ್‌ಎಫ್‌ಒ ಜೆ.ಆರ್.ವಿನಯ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.