ADVERTISEMENT

ಹುಣಸೋಡು ದುರ್ಘಟನೆ| ಈಶ್ವರಪ್ಪ ರಾಜೀನಾಮೆಗೆ ಮಹಿಳಾ ಕಾಂಗ್ರೆಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 11:40 IST
Last Updated 6 ಫೆಬ್ರುವರಿ 2021, 11:40 IST
ಪುಷ್ಪಾ
ಪುಷ್ಪಾ   

ಶಿವಮೊಗ್ಗ: 6 ಜನರ ಸಾವಿಗೆ ಕಾರಣವಾದ ಹುಣಸೋಡು ಸ್ಫೋಟ ಪ್ರಕರಣದ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ರಾಜಿನಾಮೆ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಆಗ್ರಹಿಸಿದರು.

ಪ್ರಕರಣದ ತನಿಖೆಯ ದಿಕ್ಕು ತಪ್ಪುತ್ತಿದೆ. ಇದರ ಹಿಂದೆ ಬಿಜೆಪಿ ರಾಜಕಾರಣಿಗಳ ಕೈವಾಡವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇಲಾಖೆಗಳ ಅಧಿಕಾರಿಗಳಿಗೆ ಕಣ್ಣುಮುಚ್ಚಿ ಕುಳಿತುಕೊಳ್ಳಿ ಎಂದು ಸಭೆಗಳಲ್ಲೇ ಹಿಂದೆ ಸೂಚನೆ ನೀಡಿದ್ದರು. ಹಾಗಾಗಿ, ಘಟನೆ ಕುರಿತು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಬಿಜೆಪಿ ಸರ್ಕಾರದಲ್ಲಿ ಬಡವರ ಬದುಕು ಭಾರವಾಗಿದೆ. ಬಿಜೆಪಿ ಸರ್ಕಾರಕ್ಕೆ ಮಾನವೀಯತೆ ಇಲ್ಲ. ಸಾಮಾನ್ಯ ಜನರಿಗೆ ನೆಮ್ಮದಿ ಇಲ್ಲ. ಬೆಲೆ ಏರಿಕೆ ಬಡವರನ್ನು ಹೈರಾಣಾಗಿಸಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲ ಎಂದು ದೂರಿದರು.

ADVERTISEMENT

ಮೋದಿ ಅಧಿಕಾರಕ್ಕೆ ಬಂದರೆ ಅಚ್ಛೆ ದಿನ ಆರಂಭ ಎಂಬ ಘೋಷಣೆ ಮೊಳಗಿಸಿದ್ದರು. ಇಂದು ಕೊಚ್ಚೆ ದಿನಗಳನ್ನು ಕಾಣುತ್ತಿದ್ದೇವೆ. ಅಡುಗೆ ಅನಿಲ, ತೈಲ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಷ್ಟಾದರೂ ಮೋದಿ ಭಕ್ತರು ದೇಶಕ್ಕಾಗಿ ಬೆಲೆ ಏರಿಕೆಯಾಗಿದೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರ ತನ್ನ ಭಕ್ತರಿಗಾಗಿ ಪ್ರತ್ಯೇಕ ಬೆಲೆ ಏರಿಕೆ ಮಾಡಲಿ. ಜನ ಸಾಮಾನ್ಯರಿಗೆ, ಬಡವರಿಗೆ ಬಿಪಿಎಲ್ ಕಾರ್ಡುಗಳ ಮೂಲಕ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ಚಿಂತಕ ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಘಟನೆ ಭಾರತೀಯ ಸಂಸ್ಕೃತಿಗೆ ವಿರುದ್ಧ. ಪ್ರಚಾರದ ಉದ್ದೇಶ ಬಿಟ್ಟರೆ ಬೇರೆ ಇಲ್ಲ. ಅವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ಅತ್ಯಾಚಾರದ ವಿರುದ್ಧ, ದುರ್ಬಲ ಮಹಿಳೆಯರ ಪರ ಹೋರಾಟ ನಡೆಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಸೌಂಗಧಿಕಾ ರಘುನಾಥ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಕವಿತಾ, ವಿಜಯಲಕ್ಷ್ಮಿ ಪಾಟೀಲ್, ಫರಿದಾಖಾನಂ, ಗೌಸಿಯಾ ವಾಜಿಯಾ, ರೇಷ್ಮಾ, ಸುವರ್ಣಾ ನಾಗರಾಜ್, ಸೆಲ್ವ ಮಾರ್ಟಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.