
ಸಾಗರ: ಇಲ್ಲಿನ ನೆಹರು ಮೈದಾನದಲ್ಲಿ ಮಾರಿಕಾಂಬಾ ಜಾತ್ರೆ ಅಂಗವಾಗಿ ಶನಿವಾರ ನಡೆದ ರಾಷ್ಟ್ರಮಟ್ಟದ ಕುಸ್ತಿ ಟೂರ್ನಿ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.
₹1 ಲಕ್ಷ ಮೌಲ್ಯದ ಬೆಳ್ಳಿ ಗದೆಗಾಗಿ ದೆಹಲಿಯ ಉದಯಕುಮಾರ್ ಹಾಗೂ ಶಿಕಾರಿಪುರ ತಾಲ್ಲೂಕಿನ ಮಾಸೂರಿನ ರೋಷನ್ ನಡುವೆ ನಡೆದ ಪೈಪೋಟಿ ಪ್ರೇಕ್ಷಕರ ಮನಸೂರೆಗೊಂಡಿತು.
ಮೊದಲ 15 ನಿಮಿಷಗಳಲ್ಲಿ ಇಬ್ಬರೂ ರಕ್ಷಣಾತ್ಮಕ ತಂತ್ರದ ಮೊರೆ ಹೋದರು. ನಂತರ ರೋಷನ್ ಕೊಂಚ ಆಕ್ರಮಣಕಾರಿಯಾಗಿದರು. ಬಿಗಿ ಪಟ್ಟುಗಳನ್ನು ಹಾಕಿ ಉದಯಕುಮಾರ್ ವಿರುದ್ಧ ಮೇಲುಗೈ ಸಾಧಿಸಿದರು.
ಪಂದ್ಯದ 25 ನೇ ನಿಮಿಷದಲ್ಲಿ ಆಕರ್ಷಕ ಪಟ್ಟು ಹಾಕಿದ ರೋಷನ್, ಉದಯಕುಮಾರ್ ಅವರನ್ನು ಕೆಳಕ್ಕೆ ಉರುಳಿಸಿದರು. ತಕ್ಷಣ ಸಾವರಿಸಿಕೊಂಡ ಉದಯಕುಮಾರ್ ಪ್ರತಿಪಟ್ಟು ಹಾಕಿ ರೋಷನ್‌ಗೆ ತಿರುಗೇಟು ನೀಡಿದರು.
30 ನಿಮಿಷ ಆದರೂ ಫಲಿತಾಂಶ ಬಾರದೆ ಇದ್ದುದರಿಂದ ಆಯೋಜಕರು ಹೆಚ್ಚುವರಿಯಾಗಿ 10 ನಿಮಿಷಗಳ ಅವಕಾಶ ನೀಡಿದರು. ಈ ಹಂತದಲ್ಲಿ ಇಬ್ಬರೂ ಪೈಲ್ವಾನರು ಲೀಲಾಜಾಲವಾಗಿ ಪಟ್ಟುಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.
ಕುಸ್ತಿ ಮುಗಿಯಲು 3 ನಿಮಿಷಗಳು ಮಾತ್ರ ಬಾಕಿ ಉಳಿದಿದ್ದಾಗ ಕಾಲುಗಳ ಮೂಲಕ ಪಟ್ಟು ಹಾಕಿದ ರೋಷನ್, ಉದಯಕುಮಾರ್ ಅವರನ್ನು ನೆಲಕ್ಕುರುಳಿಸಿದರು. ಅವರು ಎದುರಾಳಿಯನ್ನು ಚಿತ್ ಮಾಡಿದಾಗ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಶಾಸಕ ಗೋಪಾಲಕೃಷ್ಣ ಬೇಳೂರು ರೋಷನ್‌ಗೆ ಬೆಳ್ಳಿ ಗದೆ ನೀಡಿದರು. ಮಹಾರಾಷ್ಟ್ರದ ಲೋಕೇಶ್, ಶಿಕಾರಿಪುರದ ಸಾಕೇತ್, ಬೆಳಗಾವಿಯ ಸೋಮು, ಶಿಮಮೊಗ್ಗದ ವರುಣ್, ಬೀರೂರಿನ ಚಂದ್ರು, ಹಾವೇರಿಯ ತಾಹೀರ್, ಸಾಂಗ್ಲಿಯ ಪಪ್ಪು, ಜಮಖಂಡಿಯ ಗಜಾನನ, ಮಹಾರಾಷ್ಟ್ರದ ರಾಜು ಅವರು ಅಮೋಘ ಪ್ರದರ್ಶನದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಕುಸ್ತಿ ಸಮಿತಿ ಸಂಚಾಲಕ ಅಶೋಕ್ ಕುಮಾರ್, ಶಶಿಕುಮಾರ್, ಸಂತೋಷ್ ಸದ್ಗುರು, ಎಚ್.ಆರ್.ಶ್ರೀಧರ್, ಕೆಂಚಪ್ಪ, ಲೋಕೇಶ್, ಭರ್ಮಣ್ಣ, ಬಸವರಾಜ್ ಇದ್ದರು. ಭಾನುವಾರ ಕುಸ್ತಿ ಟೂರ್ನಿ ಕೊನೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.