ADVERTISEMENT

ಶಿವಮೊಗ್ಗ | ಕಲೆ, ಸಂಗೀತದಿಂದ ಉತ್ತಮ ಸಮಾಜ: ಸಂಸದ ಯದುವೀರ್

ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವ; 301 ಕಲಾವಿದೆಯರಿಂದ ಏಕಕಾಲದಲ್ಲಿ ವೀಣಾ ವಾದನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:01 IST
Last Updated 19 ಜನವರಿ 2026, 4:01 IST
ಶಿವಮೊಗ್ಗದ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ರಾತ್ರಿ 301 ಕಲಾವಿದೆಯರು ಏಕಕಾಲದಲ್ಲಿ ವೀಣೆ ನುಡಿಸಿದ ವಿಶೇಷ ಕ್ಷಣ
ಶಿವಮೊಗ್ಗದ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ರಾತ್ರಿ 301 ಕಲಾವಿದೆಯರು ಏಕಕಾಲದಲ್ಲಿ ವೀಣೆ ನುಡಿಸಿದ ವಿಶೇಷ ಕ್ಷಣ   

ಶಿವಮೊಗ್ಗ: ಭಾರತೀಯರು ತಮ್ಮ ಧರ್ಮ, ನೆಲದ ಬಗ್ಗೆ ನಿಜವಾದ ಭಾವನೆಯನ್ನು ಅನುಭವಿಸಬೇಕಾದರೆ ಅದು ಇಲ್ಲಿನ ಪಾರಂಪರಿಕ ಕಲೆಯಿಂದ ಮಾತ್ರ ಸಾಧ್ಯ ಎಂದು ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

ಇಲ್ಲಿನ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ, ಸುಶ್ರಾವ್ಯ ಸಂಗೀತ ವಿದ್ಯಾಲಯ, ಸಾಯಿಸೃತಿ ಸಂಗೀತ ವಿದ್ಯಾಲಯದ ಸಹಭಾಗಿತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ರಾತ್ರಿ ನಡೆದ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ವೀಣಾ ತ್ರಿಶತೋತ್ಸವ ಉದ್ಘಾಟಿಸಿ ಮಾತನಾಡಿದರು.

ಪಾಶ್ಚಾತ್ಯ ದೇಶದಿಂದ ಬಂದ ಸಂಗೀತವನ್ನು ಸ್ವಾಗತಿಸೋಣ. ಅದರ ಮಧ್ಯೆ ಕರ್ನಾಟಕದ ಪರಂಪರೆಯ ಕಲೆ ಹಾಗೂ ಸಂಗೀತ ಉಳಿಸಿ ಬೆಳೆಸೋಣ. ಆಗ ಒಳ್ಳೆಯ ಸಮಾಜ ಕಟ್ಟಲು ಸಾಧ್ಯ. ಈ ಪರಂಪರೆಯ ಅಗ್ರಪಂಕ್ತಿಯನ್ನು ಮೈಸೂರು ಸೇರಿದಂತೆ ಬೇರೆ ಬೇರೆ ರಾಜಮನೆತನಗಳು ಕಲಾ ಪೋಷಣೆ ಮೂಲಕ ಮಾಡಿ ತೋರಿಸಿವೆ ಎಂದರು.

ADVERTISEMENT

ಕರ್ನಾಟಕ ಸಂಗೀತ, ಕಲೆಯ ರಕ್ಷಣೆಗಾಗಿ ಪ್ರೇರಣಾದಾಯಕ ಕೆಲಸ ಮಾಡಿರುವ ಸರಸ್ವತಿ ಸಂಗೀತ ಮಹಾವಿದ್ಯಾಲಯದ ಮುಖ್ಯಸ್ಥೆ ವಿಜಯಲಕ್ಷ್ಮಿ ಅವರ ಕಾರ್ಯ ಸ್ಮರಣೀಯ ಎಂದು ಶ್ಲಾಘಿಸಿದ ಅವರು, ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ವೇದಿಕೆ ಕೊಡುವ ಕೆಲಸ ಸಮಾಜದಿಂದ ಇನ್ನಷ್ಟು ಆಗಲಿ ಎಂದು ಆಶಿಸಿದರು.

ಇಡೀ ಮಲೆನಾಡು ಮೈಸೂರು ಸಂಸ್ಥಾನದ ಮಹತ್ವದ ಭಾಗ. ಅಲ್ಲಿನ ಸಂಸ್ಕೃತಿ ರೂಪುಗೊಳ್ಳಲು ಇಲ್ಲಿನ ಕೊಡುಗೆಯೂ ಮಹತ್ವದ್ದು. ಅದು ಮುಂದುವರೆಯಬೇಕಿದೆ. ಕಲೆಯ ರಕ್ಷಣೆ ಮಾಡುವ ಕೆಲಸ ಆಗಲಿ ಎಂದರು. 

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ವೀಣೆ ಭಾರತದ ಸಾಂಸ್ಕೃತಿಕ ರಾಯಭಾರಿ. ಅದರ ಬೆಳವಣಿಗೆಗೆ 25 ವರ್ಷಗಳ ತಪಸ್ಸಿನ ಫಲ ಬೆಳ್ಳಿಹಬ್ಬ ರೂಪುಗೊಂಡಿದೆ. ಸಾವಿರಾರು ವೀಣಾ ವಾದಕರನ್ನು ನಾಡಿಗೆ ಕೊಟ್ಟು ಶ್ರೇಯ ವಿಜಯಲಕ್ಷ್ಮಿ ಅವರದ್ದು ಎಂದರು. 

ಕಲೆಗೆ ಭಾಷೆ, ಧರ್ಮ ಇಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ವೀಣಾ ಅಭ್ಯಾಸ ಮಾಡಿಸುವ ಮೂಲಕ ಭಾರತೀಯ ಪರಂಪರೆಯಿಂದ ಬಂದ ಈ ಕಲೆಯ ಸಂರಕ್ಷಣೆಯನ್ನು ನಮ್ಮ ಹೆಣ್ಣುಮಕ್ಕಳು ಮಾಡುತ್ತಿದ್ದಾರೆ. ಅವರ ಸಹಭಾಗಿತ್ವ ಇದ್ದಾಗ ಮಾತ್ರ ಸಂಸ್ಕೃತಿ ಉಳಿಸಿ, ಬೆಳೆಸಿಕೊಂಡು ಹೋಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಅತಿಥಿ ಆಗಿದ್ದ ಝರೋದಾ ಕಂಪೆನಿ ಮುಖ್ಯಸ್ಥೆ ರೇವತಿ ಕಾಮತ್ ಮಾತನಾಡಿ, ;ಮೈಸೂರು ಮಹಾರಾಜರ ಆಸ್ಥಾನದ ಕಲಾವಿದರಾಗಿದ್ದ ನನ್ನ ಅಜ್ಜ, ವೀಣೆಯ ಬಗ್ಗೆ ಆಸಕ್ತಿ ಮೂಡಿಸಿದ್ದ ನನ್ನ ಅಪ್ಪ ಶೃಂಗೇರಿ ಶಾರದಾಂಬೆಗೆ ಸಲ್ಲಿಸಿದ್ದ ವೀಣೆಯ ಸೇವೆ ನನಗೆ ಪ್ರೇರಣೆಯಾಯಿತು’ ಎಂದರು.

ಶಿವಮೊಗ್ಗದಲ್ಲಿ ವೀಣೆ ಅಭ್ಯಾಸ ನಂತರ ಕ್ಯಾಲಿಕ್ಸ್ ಸಂಸ್ಥೆಯ ಮೂಲಕ ಉದ್ಯಮ ಆರಂಭಿಸಿ ಬೆಳೆದ ಬಗೆಯನ್ನು ಬಿಚ್ಚಿಟ್ಟರು. ಪ್ರತಿಯೊಬ್ಬರೂ ಗಿಡ ನೆಟ್ಟು ಪರಿಸರ ಉಳಿಸಬೇಕಾದ ಮಹತ್ವವನ್ನು ಹೇಳಿದರು. ಅದರಲ್ಲೂ ಕರ್ನಾಟಕದ ಪರಿಸರದಲ್ಲಿ ಇಲ್ಲಿನ ಸಾಂಪ್ರದಾಯಿಕ ಗಿಡ–ಮರಗಳನ್ನು ನೆಟ್ಟು ಬೆಳೆಸುವ ಅಗತ್ಯತೆಯ ಕಿವಿಮಾತು ಹೇಳಿದರು.

ರಜತಮಹೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಗೀತಾ ರಮಾನಂದ್, ಮಾಜಿ ಶಾಸಕರಾದ ಎಚ್.ಎಂ.ಚಂದ್ರಶೇಖರಪ್ಪ, ಕೆ.ಬಿ.ಪ್ರಸನ್ನಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ, ವಿದುಷಿ ಪದ್ಮಿನಿ ಸುಧೀರ್ ವೇದಿಕೆಯಲ್ಲಿದ್ದರು. ಪ್ರಾಸ್ತಾವಿಕವಾಗಿ ವಿಜಯಲಕ್ಷ್ಮಿ ಮಾತನಾಡಿದರು.

ವೀಣಾ ತ್ರಿಶತೋತ್ಸವದಲ್ಲಿ ಮೈಸೂರು–ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ವೀಣೆ ನುಡಿಸಿದರು
ವೀಣಾ ವಾದನ ಮಿದುಳನ್ನು ಶುದ್ಧವಾಗಿಸುತ್ತದೆ. ಸಂಗೀತದ ಸಪ್ತಸ್ವರದ ಮೂಲವಾದ ಸರಿಗಮಪದನಿ ಅಪಶ್ರುತಿ ವೀಣೆಯಲ್ಲಿ ಸಾಧ್ಯವೇ ಇಲ್ಲ. ಅದೊಂದು ದೇವಿ ಸ್ವರೂಪ
ರೇವತಿ ಕಾಮತ್ ಝರೋದಾ ಕಂಪೆನಿ ಮುಖ್ಯಸ್ಥೆ
ವೀಣೆಯ ತಂತಿ ಹೆಚ್ಚು ಬಿಗಿ ಮಾಡಬಾರದು. ಅತ್ಯಂತ ಸಡಿಲವಾಗಿಯೂ ಬಿಡಬಾರದು. ಆಗ ಸುಗಮವಾದ ಸಂಗೀತ ಮೂಡಲು ಸಾಧ್ಯ. ಅದೇ ರೀತಿ ಜೀವನದಲ್ಲೂ ಸಮತೋಲನ ಅಗತ್ಯ
ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ

ವೀಣಾ ತ್ರಿಶತೋತ್ಸವ; ಮಹಾರಾಜರಿಂದ ವಾದನ..

ಚುಮುಚುಮು ಚಳಿಯ ನಡುವೆ ಇಲ್ಲಿನ ಫ್ರೀಡಂ ಪಾರ್ಕ್‌ ಭಾನುವಾರ ರಾತ್ರಿ ವೀಣಾ ವಾದನದ ಗಂಧರ್ವ ಗಳಿಗೆಗೆ ಸಾಕ್ಷಿಯಾಯಿತು. ದೇವಿ ಸರಸ್ವತಿಯ ನೆಚ್ಚಿನ ವಾದ್ಯ ವೀಣೆಯನ್ನು 301 ಕಲಾವಿದರು ಏಕಕಾಲದಲ್ಲಿ ನಡೆಸಿಕೊಟ್ಟಾಗ ಅದರಿಂದ ಹೊರಡಿದ ನಾದ ಇಡೀ ಪರಿಸರವನ್ನು ಕೆಲ ಹೊತ್ತು ಭಾರತೀಯ ಕಲಾ ಪರಂಪರೆಯ ವೈಭವದ ಉತ್ತುಂಗತೆಗೆ ಕರೆದೊಯ್ದಿತು.

ವಿಘ್ನವಿನಾಶಕ ಗಣಪನ ಸ್ತುತಿಯೊಂದಿಗೆ ‘ವೀಣಾ ತ್ರಿಶತೋತ್ಸವ’ದ ಸ್ಮರಣೀಯ ಗಳಿಗೆಗೆ ಚಾಲನೆ ನೀಡಲಾಯಿತು. ನಂತರ ವೀಣಾ ವಾದನ ‘ಕಾಯೋ ಶ್ರೀ ಗೌರಿ’ಯನ್ನು ನುಡಿಸಿದ ಮೈಸೂರಿನ ರಾಜವಂಶಸ್ಥರೂ ಆದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರೆದವರು ತಲೆದೂಗುವಂತೆ ಮಾಡಿದರು.

‘ಯದುವೀರ್ ಅವರು ನುಡಿಸಿದ ಕಾಯೋ ಶ್ರೀ ಗೌರಿ ಗೀತೆಯನ್ನು ಮೈಸೂರು ಅರಮನೆಯ ಕವಿ ಬಸವಪ್ಪ ಶಾಸ್ತ್ರಿ ರಚಿಸಿದ್ದಾರೆ. ಬ್ರಿಟಿಷ್ ಆಡಳಿತದಿಂದ 1881ರಲ್ಲಿ ಮೈಸೂರು ಒಡೆಯರ್ ವಂಶಕ್ಕೆ ಮೈಸೂರಿನ ಅಧಿಕಾರ ಹಸ್ತಾಂತರ ಆದಾಗ ಬಸವಪ್ಪ ಶಾಸ್ತ್ರಿ ಈ ಗೀತೆ ರಚಿಸಿದ್ದರು. ಅದು ಮೈಸೂರು ರಾಜ್ಯದ ರಾಜಗೀತೆ ಆಗಿತ್ತು. ತಾಯಿ ಚಾಮುಂಡಿದೇವಿಯನ್ನು ಸ್ತುತಿಸುತ್ತಾ ಆಡಳಿತದಲ್ಲಿರುವ ರಾಜರಿಗೆ ಒಳಿತಾಗಲಿ ರಾಜರಿಗೆ ಒಳಿತಾದರೆ ನಾಡಿಗೆ ಪ್ರಜೆಗಳಿಗೆ ಒಳಿತು ಆಗುತ್ತದೆ ಎಂಬ ಆಶಯ ಈ ಗೀತೆ ಹೊಂದಿದೆ. ಇದು ನಾಡಗೀತೆಯಷ್ಟೇ ಮಹತ್ವದ್ದು’ ಎಂದು ಸಂಘಟಕರು ಹೇಳಿದರು.

ನೆರೆದವರು ಎದ್ದು ನಿಂತು ಗೌರವ ಸಲ್ಲಿಸಿದರು. ‘ನಾಲ್ಕು ವರ್ಷದಿಂದ ವೀಣೆ ಅಭ್ಯಾಸ ಮಾಡಿರಲಿಲ್ಲ. ಕಾರ್ಯಕ್ರಮದಲ್ಲಿ ವೀಣೆ ನುಡಿಸುವ ಆಶಯದಿಂದ ಇಂದು ವಿಧಾನಪರಿಷತ್‌ ಸದಸ್ಯ ಡಿ.ಎಸ್‌.ಅರುಣ್ ಅವರ ಮನೆಯಲ್ಲಿ ಈ ಗೀತೆ ನುಡಿಸಲು ತಾಲೀಮು ನಡೆಸಿದ್ದೆ’ ಎಂದು ಯದುವೀರ್‌ ಒಡೆಯರ್‌ ಹೇಳಿದರು. ವಿದ್ವಾನ್ ಬಿ.ಆರ್.ಶ್ರೀಧರ್ ನೇತೃತ್ವದಲ್ಲಿ ಪಕ್ಕವಾದ್ಯದ ಸಹಕಾರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.