ADVERTISEMENT

ರೈತರ ಶೋಷಣೆ ತಪ್ಪಿಸಲು ಸಹಕಾರ ವ್ಯವಸ್ಥೆ ಮುಂದಾಗಲಿ: ಬಿ.ಎಸ್.ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 5:48 IST
Last Updated 18 ಆಗಸ್ಟ್ 2025, 5:48 IST
ಶಿಕಾರಿಪುರದಲ್ಲಿ ಭಾನುವಾರ ನಡೆದ ಟಿಎಪಿಸಿಎಂಎಸ್ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಿಗೆ ಸನ್ಮಾನಿಸಲಾಯಿತು
ಶಿಕಾರಿಪುರದಲ್ಲಿ ಭಾನುವಾರ ನಡೆದ ಟಿಎಪಿಸಿಎಂಎಸ್ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಿಗೆ ಸನ್ಮಾನಿಸಲಾಯಿತು   

ಶಿಕಾರಿಪುರ: ರೈತರ ಶೋಷಣೆ ನಡೆಸುತ್ತಿರುವ ಮಧ್ಯವರ್ತಿ ವ್ಯವಸ್ಥೆ ತಪ್ಪಿಸುವಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು. 

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ಟಿಎಪಿಸಿಎಂಎಸ್ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಸಾಲದ ಸುಳಿಗೆ ರೈತ ಸಿಲುಕದಂತೆ ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಹವಾಮಾನ ಆಧರಿತ ಬೆಳೆವಿಮೆ ಜಾರಿಗೆ ಬಂದಿದೆ. ಆದರೂ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯಲ್ಲಿ ಮಧ್ಯವರ್ತಿ ಹಾವಳಿ ಸಂಪೂರ್ಣ ತಪ್ಪಿಲ್ಲ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸಹಕಾರ ಸಂಘಗಳು ಬೆಳೆದು ನಿಲ್ಲಬೇಕಿದೆ ಎಂದರು. 

ADVERTISEMENT

ಸಹಕಾರಿ ವ್ಯವಸ್ಥೆಯಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯ ಎಲ್ಲೆಡೆ ನಿರ್ಮಾಣವಾಗಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಶೂನ್ಯ ಬಡ್ಡಿದರಕ್ಕೆ ಸಾಲ, ಹಾಲಿಗೆ ಪ್ರೋತ್ಸಾಹ ಧನ ಸೇರಿ ಹಲವು ಜನಪರ ಯೋಜನೆ ನೀಡಿದ್ದೆ. ತಾಲ್ಲೂಕಿನ ರೈತರ ಅನುಕೂಲಕ್ಕೆ 300ಕ್ಕೂ ಹೆಚ್ಚು ಕೆರೆ ತುಂಬಿಸುವ ಯೋಜನೆ ಜಾರಿಗೊಂಡಿದೆ. ತಾಲ್ಲೂಕಿನ ಬಹುತೇಕ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. 

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನು ನಾವೆಲ್ಲರೂ ಕೈಗೊಳ್ಳಬೇಕಿದೆ. ಅಡಿಕೆಗೆ ಸ್ಥಿರವಾದ ಬೆಲೆ ಸಿಗುವಂತ ವ್ಯವಸ್ಥೆ ಅಗತ್ಯವಿದೆ. ಹಾಸ್ಟೆಲ್, ಆಸ್ಪತ್ರೆ, ಬಸ್ ಸೌಲಭ್ಯ ಕಲ್ಪಿಸುವುದಕ್ಕೆ ಸಹಕಾರಿ ಸಂಘಗಳಿಗೆ ಅವಕಾಶವಿದ್ದು ಈ ನಿಟ್ಟಿನಲ್ಲಿ ಸಂಘಗಳು ಚಿಂತನೆ ನಡೆಸಬೇಕು. ಶಿವಮೊಗ್ಗ –ರಾಣೇಬೆನ್ನೂರು ರೈಲ್ವೆ ಯೋಜನೆಗೆ ಭೂಮಿ ನೀಡುವ ರೈತರಿಗೆ ಹೆಚ್ಚಿನ ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಟಿಎಪಿಸಿಎಂಎಸ್ ನಿರ್ದೇಶಕ ಬಿ.ಡಿ.ಭೂಕಾಂತ್ ಮಾತನಾಡಿ, ಸಂಘ ವಜ್ರ ಮಹೋತ್ಸವ ಆಚರಿಸುತ್ತಿದೆ ಎಂದರೆ ಅದೊಂದು ಯಶೋಗಾಧೆ ಸಾರುತ್ತದೆ. ನಂಬಿಕೆ, ಕಾರ್ಯತತ್ಪರತೆ ಸಮರ್ಪಣಾಭಾವಕ್ಕೆ ಸಾಕ್ಷಿಯಾಗಿದೆ. ಸಂಸ್ಥೆ ಈ ಹಂತಕ್ಕೆ ಬರುವುದಕ್ಕೆ ಕಾರಣರಾದ ಈ ಹಿಂದಿನ ಎಲ್ಲ ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿಯ ಶ್ರಮ ಇದೆ ಎಂದು ಹೇಳಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಅಧ್ಯಕ್ಷತೆ ವಹಿಸಿದ್ದರು. ನಗರದ ಮಹಾದೇವಪ್ಪ ಸೇರಿ ಅನೇಕ ಹಿರಿಯ ಸಹಕಾರಿಗಳಿಗೆ ಸನ್ಮಾನಿಸಲಾಯಿತು. ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಪುರಸಭೆ ಅಧ್ಯಕ್ಷೆ ಸುನಂದ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಎಚ್.ಎಸ್.ರವೀಂದ್ರ, ಶಿಮೂಲ್ ನಿರ್ದೇಶಕ ಟಿ.ಶಿವಶಂಕರಪ್ಪ, ಮುಖಂಡರುಗಳಾದ ಕೆ.ಎಸ್.ಗುರುಮೂರ್ತಿ, ಎಂ.ಬಿ.ಚನ್ನವೀರಪ್ಪ, ಅಗಡಿ ಅಶೋಕ್, ಹುಲ್ಮಾರ್ ಮಹೇಶ್, ಎಸ್.ಎಸ್.ರಾಘವೇಂದ್ರ, ಚುರ್ಚಿಗುಂಡಿ ಶಶಿಧರ್ ಎಲ್ಲ ನಿರ್ದೇಶಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.