ADVERTISEMENT

ತುಮಕೂರಿನಲ್ಲಿ ಮಹಿಳೆಯರು ತಯಾರಿಸಿದರು ಲಕ್ಷ ಮಾಸ್ಕ್‌!

‘ಸಂಜೀವಿನಿ’ ಯೋಜನೆ ಅಡಿ ಜಿಲ್ಲೆಯ ಸ್ವಸಹಾಯ ಸಂಘದ ಸದಸ್ಯರಿಗೆ ಉತ್ತೇಜನ

ಸುಮಾ ಬಿ.
Published 1 ಜೂನ್ 2020, 1:58 IST
Last Updated 1 ಜೂನ್ 2020, 1:58 IST
ತಿಪಟೂರಿನ ಜೇನುಶ್ರೀ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಮಾಸ್ಕ್‌ ತಯಾರಿಸುತ್ತಿರುವುದು
ತಿಪಟೂರಿನ ಜೇನುಶ್ರೀ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಮಾಸ್ಕ್‌ ತಯಾರಿಸುತ್ತಿರುವುದು   

ತುಮಕೂರು: ಜಿಲ್ಲೆಯ ವಿವಿಧ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಎರಡೂವರೆ ತಿಂಗಳಲ್ಲಿ 1.8 ಲಕ್ಷ ಮಾಸ್ಕ್‌ ತಯಾರಿಸಿದ್ದಾರೆ. ಕೊರೊನಾ ಹರಡುವಿಕೆ ತಡೆಯಲು ಅಳಿಲು ಸೇವೆ ಸಲ್ಲಿಸಿದ ಮಹಿಳೆಯರ ಈ ಕಾರ್ಯಕ್ಕೆ ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆಯ (ಎನ್‌ಆರ್‌ಎಲ್‌ಎಂ) ‘ಸಂಜೀವಿನಿ’ ಯೋಜನೆ ಅಡಿ ವಿವಿಧ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದ್ದು, ಕೊರೊನಾ ತಂದಿಟ್ಟ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಈ ಗುಂಪು ಗಳ ಸದಸ್ಯರು ಮಾಸ್ಕ್‌ ತಯಾರಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ಜತೆಗೆ ಮಾಸ್ಕ್‌ಗಳ ಕೊರತೆಯನ್ನೂ ನೀಗಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್‌ ನಿರ್ದೇಶನದ ಮೇರೆಗೆ ಮಾಸ್ಕ್‌ಗಳನ್ನು ತಯಾರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 112 ಸ್ವ ಸಹಾಯ ಗುಂಪುಗಳಿದ್ದು, ಸ್ವಸಹಾಯ ಗುಂಪುಗಳಲ್ಲಿ ಹೊಲಿಗೆ ತರಬೇತಿ ಪಡೆದಿದ್ದ ‌522 ಮಹಿಳೆಯರು 1.8 ಲಕ್ಷ ಮಾಸ್ಕ್‌ ತಯಾರಿಸಿದ್ದಾರೆ.

ADVERTISEMENT

ಕೊರಾನಾ ಲಾಕ್‌ಡೌನ್‌ ಆರಂಭವಾಗುವುದಕ್ಕೂ ಮುಂಚೆ ಅಂದರೆ ಮಾರ್ಚ್‌ 15ರಿಂದ ಎನ್‌ಆರ್‌ಎಲ್‌ಎಂ ಸೂಚನೆಯಂತೆ ಕೆಲ ಸ್ವಸಹಾಯ ಸಂಘಗಳು ಮಾಸ್ಕ್‌ ತಯಾರಿ ಕಾರ್ಯ ಆರಂಭಿಸಿದ್ದವು. ಕೊರೊನಾ ಹರಡುವಿಕೆ ಹೆಚ್ಚಾದಂತೆ ಮಾಸ್ಕ್‌ಗಳಿಗೆ ಬೇಡಿಕೆಯೂ ಹೆಚ್ಚಾಯಿತು. ಆಗ ಜಿಲ್ಲೆಯ ವಿವಿಧ ಸ್ವಸಹಾಯ ಗುಂಪುಗಳಲ್ಲಿ ಬಟ್ಟೆ ಹೊಲೆಯುವ ಮಹಿಳೆಯರು ಮಾಸ್ಕ್‌ ತಯಾರಿಯಲ್ಲಿ ತೊಡಗಿಸಿಕೊಂಡರು.

ಯಾರಿಗೆ ವಿತರಣೆ: ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಬ್ಬಂದಿಗೆ, ಕೊರೊನಾ ವಾರಿಯರ್ಸ್‌ಗೆ, ಎಸ್‌ಪಿ ಕಚೇರಿ, ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ಮಾರ್ಟ್‌ ಸಿಟಿ ಕಾಮಗಾರಿ ಸಿಬ್ಬಂದಿ, ಕ್ವಾರಂಟೈನ್‌ನಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಹೀಗೆ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಮಾಸ್ಕ್‌ಗಳನ್ನು ವಿತರಿಸಲಾಗಿದೆ.

ವೈದ್ಯರ ಸಲಹೆ: ರಾಜ್ಯದಲ್ಲಿ ಕೊರೊನಾ ಕಾಲಿಟ್ಟ ಸಂದರ್ಭದಲ್ಲಿ ಎಲ್ಲೆಡೆ ಮಾಸ್ಕ್‌ಗೆ ಬೇಡಿಕೆ ಹೆಚ್ಚಾಯಿತು. ಆದರೆ, ಬೇಡಿಕೆಯಷ್ಟು ಮಾಸ್ಕ್‌ಗಳ ಪೂರೈಕೆ ಇರಲಿಲ್ಲ. ಆಗ ಜಿಲ್ಲಾ ಪಂಚಾಯಿತಿ ಸಿಇಒ ಸ್ವಸಹಾಯ ಗುಂಪುಗಳಿಗೆ ಒಂದಷ್ಟು ಮಾಸ್ಕ್‌ ತಯಾರಿಸಲು ಹೇಳಿದರು. ಹೀಗೆ ತಯಾರಿಸಿದ ಮಾಸ್ಕ್‌ ಅನ್ನು ಆರೋಗ್ಯಾಧಿಕಾರಿಗಳ ಪರಿಶೀಲನೆಗೆ ಕಳುಹಿಸಲಾಯಿತು. ವೈದ್ಯರು ಪರಿಶೀಲಿಸಿ ಮಾಸ್ಕ್‌ ಬಳಸಲು ಒಪ್ಪಿಗೆ ನೀಡಿದರು. ಬಳಿಕ ಸ್ವಸಹಾಯ ಸಂಘಗಳಿಗೆ ಎನ್‌ಆರ್‌ಎಲ್‌ಎಂ ಮೂಲಕ ಮಾಸ್ಕ್‌ ತಯಾರಿಸಲು ಉತ್ತೇಜಿಸಲಾಯಿತು.

***

2000 ಹೆಡ್‌ ಶೀಲ್ಡ್‌ ಫೇಸ್‌ ಮಾಸ್ಕ್‌

ತಿಪಟೂರು ತಾಲ್ಲೂಕಿನ ಈಚನೂರು ಅಮೃತಬಿಂದು ಗ್ರಾಮ ಪಂಚಾಯಿತಿ ಒಕ್ಕೂಟದ ಜೇನುಶ್ರೀ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು 2 ಸಾವಿರ ಹೆಡ್‌ ಶೀಲ್ಡ್‌ ಫೇಸ್‌ ಮಾಸ್ಕ್‌ ತಯಾರಿಸಿದ್ದಾರೆ. ಈ ಮಾಸ್ಕ್‌ಗಳನ್ನು ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪಿಪಿಇ ಕಿಟ್‌ ಬಳಸುವ ವೈದ್ಯರಿಗೆ ನೀಡಲಾಗಿದೆ. ಸಂಘದ ಸದಸ್ಯರು ಯೂಟ್ಯೂಬ್‌ನಲ್ಲಿ ವಿಡಿಯೊ ನೋಡಿ ಸಿದ್ಧಪಡಿಸುವುದನ್ನು ಕಲಿತರು. ಕಚ್ಚಾ ವಸ್ತುಗಳ ಕೊರತೆಯಿಂದ ಸದ್ಯಕ್ಕೆ ಕೆಲಸ ನಿಲ್ಲಿಸಲಾಗಿದೆ.

‘ಈ ಹಿಂದೆ ಸಂಘದಿಂದ ಹಪ್ಪಳ, ಉಪ್ಪಿನಕಾಯಿ, ಹುಣಸೆ ಹಣ್ಣಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೆವು. ಲಾಕ್‌ಡೌನ್‌ನಿಂದ ಎಲ್ಲರೂ ಮನೆಯಲ್ಲೇ ಉಳಿದುದಿದ್ದು, ಬಹುತೇಕರ ಮನೆಗಳಲ್ಲಿ ಇವು ತಯಾರಾಗಿವೆ. ಹಾಗಾಗಿ ಬೇಡಿಕೆ ಇಲ್ಲ. ಈ ಸಮಯದಲ್ಲಿ ನಮ್ಮನ್ನು ಕೈ ಹಿಡಿದದ್ದು ಮಾಸ್ಕ್‌ ತಯಾರಿಕೆ. ಹೆಡ್‌ ಶೀಲ್ಡ್‌ ಮಾಸ್ಕ್‌ ತಯಾರಿಕೆಗೆ ಉತ್ತಮ ಸ್ಪಂದನೆ ದೊರಕಿತು’ ಎನ್ನುತ್ತಾರೆ ಜೇನುಶ್ರೀ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯೆ ಕವಿತಾ.

***

ಒಂದು ಮಾಸ್ಕ್‌ಗೆ ₹20

ಒಂದು ಮಾಸ್ಕ್‌ ತಯಾರಿಸಲು ಸುಮಾರು ₹14ರಿಂದ ₹15 ತಗಲುತ್ತದೆ. ಜಿಲ್ಲಾ ಪಂಚಾಯಿತಿಯಿಂದ ಮಾಸ್ಕ್‌ಗಳನ್ನು ₹20ಕ್ಕೆ ಒಂದರಂತೆ ಕೊಂಡುಕೊಳ್ಳಲಾಗಿದೆ. ಮಾಸ್ಕ್‌ಗಳನ್ನು ಮರುಬಳಕೆ ಮಾಡಬಹುದಾಗಿದ್ದು, ಬೇರೆಡೆಗಿಂತ ಕಡಿಮೆ ಬೆಲೆಗೆ ಸಿಗುತ್ತವೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೂ ಸಹಕಾರಿಯಾಗಿದೆ ಎನ್ನುತ್ತಾರೆ ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಎಂ.ಪಿ.ಅಶೋಕ್‌.

***

ದಿನಕ್ಕೆ 150ರಿಂದ 200 ಮಾಸ್ಕ್‌

ಕೊರೊನಾ ಆರ್ಥಿಕ ಸಂಕಷ್ಟದಲ್ಲಿ ನಮ್ಮನ್ನು ಕೈ ಹಿಡಿದದ್ದು ಮಾಸ್ಕ್‌. ‘ಸಂಜೀವಿನಿ’ ನಮ್ಮ ಬಾಳಿಗೆ ಸಂಜೀವಿನಿ ಆಗಿದೆ. ಎನ್‌ಆರ್‌ಎಂಎಲ್‌ ಅಧಿಕಾರಿಗಳು ಸಾಕಷ್ಟು ಉತ್ತೇಜನ ನೀಡಿದರು. ದಿನಕ್ಕೆ ಒಬ್ಬರು 150ರಿಂದ 200 ಮಾಸ್ಕ್‌ ತಯಾರಿಸುತ್ತೇವೆ. ಒಬ್ಬೊಬ್ಬರೂ ಸುಮಾರು 4,000ದಿಂದ 5,000 ಮಾಸ್ಕ್‌ ತಯಾರಿಸಿದ್ದೇವೆ. ಗ್ರಾಮದ ಬಡಜನರಿಗೆ ಉಚಿತವಾಗಿ ನೀಡಿದ್ದೇವೆ.

ವಿಮಲಾ, ಶ್ರೀಮಹರ್ಷಿ ವಾಲ್ಮಿಕಿ ನಾಯಕ ಸಂಘ, ಕಿಬ್ಬನಹಳ್ಳಿ, ತಿಪಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.