ADVERTISEMENT

ಕೈ ಹಿಡಿದ ಹೈನುಗಾರಿಕೆ: ತಿಂಗಳಿಗೆ ₹3 ಲಕ್ಷ ಲಾಭ ಗಳಿಸುತ್ತಿರುವ ತುಮಕೂರಿನ ಮಹಿಳೆ!

ಕೈ ಹಿಡಿದ ಹೈನುಗಾರಿಕೆ, ನಿತ್ಯ ಡೇರಿಗೆ 640 ಲೀಟರ್‌ ಹಾಲು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 13:39 IST
Last Updated 28 ಆಗಸ್ಟ್ 2023, 13:39 IST
ಕೊರಟಗೆರೆ ತಾಲ್ಲೂಕಿನ ಮಣುವಿನಕುರಿಕೆ ಗ್ರಾಮದ ಕೊಟ್ಟಿಗೆಯಲ್ಲಿರುವ ಹಸುಗಳು
ಕೊರಟಗೆರೆ ತಾಲ್ಲೂಕಿನ ಮಣುವಿನಕುರಿಕೆ ಗ್ರಾಮದ ಕೊಟ್ಟಿಗೆಯಲ್ಲಿರುವ ಹಸುಗಳು    

ತುಮಕೂರು: ‘ಎಲ್ಲರಿಗೂ ಕೊರೊನಾ ನೆಗೆಟಿವ್‌ ಆದ್ರೆ, ನನಗೆ ಪಾಸಿಟಿವ್‌ ಆಯ್ತು. ಲಾಕ್‌ಡೌನ್‌ ಸಮಯದಲ್ಲಿ ನಮ್ಮ ಹೈನೋದ್ಯಮ ಮತ್ತಷ್ಟು ವಿಸ್ತಾರವಾಯಿತು’ ಎಂದು ಕೊರಟಗೆರೆ ತಾಲ್ಲೂಕಿನ ಮಣುವಿನಕುರಿಕೆ ಗ್ರಾಮದ ರಾಜೇಶ್ವರಿ ನಗುತ್ತಲೇ ಹೇಳಿದರು.

ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಅನೇಕರು ನಗರಗಳನ್ನು ಬಿಟ್ಟು ತಮ್ಮ ಊರುಗಳಿಗೆ ತೆರಳಿ, ಸ್ವಯಂ ಉದ್ಯೋಗ ಕಂಡುಕೊಂಡಿದ್ದರು. ಇದೇ ಹಾದಿಯಲ್ಲಿ ಸಾಗಿದ ರಾಜೇಶ್ವರಿ ಅವರಿಗೆ ಹೈನುಗಾರಿಕೆ ಕೈ ಹಿಡಿದಿದೆ.

45 ಹಸುಗಳಿಂದ ಪ್ರತಿ ನಿತ್ಯ 640 ಲೀಟರ್ ಹಾಲು ಕರೆದು ಡೇರಿಗೆ ಹಾಕುತ್ತಿದ್ದಾರೆ. ನಾಲ್ಕೈದು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ₹40 ಲಕ್ಷ ಬಂಡವಾಳದಲ್ಲಿ ಹೈನುಗಾರಿಕೆ ಆರಂಭಿಸಿದ್ದರು. ಈಗ ಒಂದು ತಿಂಗಳಿಗೆ ₹7 ಲಕ್ಷ ವಹಿವಾಟು ನಡೆಯುತ್ತಿದೆ. ಕೆಲಸ ಮಾಡುವವರ ಕೂಲಿ ಸೇರಿದಂತೆ ಒಟ್ಟು ₹4 ಲಕ್ಷ ಖರ್ಚು ತಗುಲುತ್ತದೆ. ಸುಮಾರು ₹3 ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತಿದೆ. ಪ್ರತಿ ತಿಂಗಳು ₹80 ಸಾವಿರ ಹಾಲಿನ ಪ್ರೋತ್ಸಾಹ ಧನ ರಾಜೇಶ್ವರಿ ಕೈ ಸೇರುತ್ತಿದೆ.

ADVERTISEMENT

ಬಿಕಾಂ, ಎಲ್‌ಎಲ್‌ಬಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ರಾಜೇಶ್ವರಿ ಒಂದು ವರ್ಷ ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿದರು. ನಂತರ ಕೆಲಸ ಬಿಟ್ಟು ಟ್ರಾವೆಲ್ಸ್‌ ಏಜೆನ್ಸಿ ಶುರು ಮಾಡಿದ್ದರು. ಈ ವ್ಯವಹಾರ ಚೆನ್ನಾಗಿ ನಡೆಯುತ್ತಿರುವಾಗಲೇ ಕೋವಿಡ್‌ನಿಂದಾಗಿ ವ್ಯವಹಾರವೇ ನಿಂತು ಹೋಗಿ ದಿಕ್ಕು ತೋಚದಂತಾಗಿತ್ತು. ಪ್ರಾರಂಭದಲ್ಲಿ ಎರಡು ಹಸು ತಂದು ಹೈನುಗಾರಿಕೆ ಶುರು ಮಾಡಿದ್ದರು. ಈಗ ಅದು ದೊಡ್ಡದಾಗಿ ಬೆಳೆದು ನಿಂತಿದೆ.

ರಾಜೇಶ್ವರಿ ಪತಿ ಸಹಕಾರಿ ಬ್ಯಾಂಕ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸವಾಲೊಡ್ಡುವ ರೀತಿಯಲ್ಲಿ ಹೈನುಗಾರಿಕೆಯಿಂದ ಲಾಭ ಪಡೆಯುತ್ತಿದ್ದಾರೆ. ನಾಲ್ಕೂವರೆ ಎಕರೆ ಜಮೀನಿನಲ್ಲಿ ತೆಂಗಿನ ಜೊತೆಗೆ ಹಸುಗಳಿಗೆ ಮೇವು ಬೆಳೆಯುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಮೇವು ಕೊರತೆಯಾದರೆ ಮಂಡ್ಯದಿಂದ ಮೇವು ತರಿಸಿಕೊಳ್ಳುತ್ತಾರೆ. ಹಸುಗಳ ಗೊಬ್ಬರವನ್ನೇ ಜಮೀನಿಗೆ ಬಳಸುತ್ತಿದ್ದಾರೆ. ಕೊಳವೆ ಬಾವಿಗಳ ಮುಖಾಂತರ ನೀರು ಪೂರೈಸಲಾಗುತ್ತಿದೆ.

ಪ್ರತ್ಯೇಕವಾಗಿ ಎರಡು ಕೊಟ್ಟಿಗೆಗಳನ್ನು ನಿರ್ಮಿಸಿ ಹಸುಗಳ ಆರೈಕೆ ಮಾಡಲಾಗುತ್ತಿದೆ. ಯಂತ್ರದ ಮೂಲಕ ಹಾಲು ಕರೆಯುತ್ತಾರೆ. ಮೇವು ಕಟಾವಿಗೂ ಯಂತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಯಶಸ್ಸು ಕಂಡಿದ್ದಾರೆ. ಕೊಟ್ಟಿಗೆ ಬಳಿ ರಕ್ಷಣೆಗೂ ಆದ್ಯತೆ ನೀಡಿದ್ದು, ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.

ಹಸುಗಳ ಆರೈಕೆಯಲ್ಲಿ ತೊಡಗಿರುವ ರಾಜೇಶ್ವರಿ

45 ಹಸು ಸಾಕಾಣಿಕೆ ಎರಡು ಕೊಟ್ಟಿಗೆ ನಿರ್ಮಾಣ ₹3 ಲಕ್ಷ ಆದಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.