ತುಮಕೂರು: ₹ 2 ಸಾವಿರ ದಂಡ ಹಾಕಿದ್ದಕ್ಕೆ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಯ ಬರಹಗಳನ್ನು ಪ್ರಕಟಿಸಿದ ಪ್ರಕಾಶ್ ಎಂಬುವವರು ಆಯುಕ್ತರ ಕ್ಷಮಾಪಣೆ ಕೋರಿದ್ದಾರೆ.
ಪ್ರಕಾಶ್, ಯಾವುದೇ ಪರವಾನಗಿ ಪಡೆಯದೆ ಇಲ್ಲಿನ ಗಾಂಧಿನಗರದಲ್ಲಿ ಮಹಿಳಾ ಅತಿಥಿಗೃಹ ಆರಂಭಿಸಿದ್ದರು. ಆ ಬಗ್ಗೆ ನಗರದ ಎಲ್ಲೆಡೆ ತಂಗುದಾಣಗಳು, ಮರಗಳ ಮೇಲೆ ಪೋಸ್ಟರ್ ಸಹ ಅಂಟಿಸಿ ಪ್ರವೇಶಕ್ಕೆ ಪ್ರಚಾರ ನೀಡಿದ್ದರು. ಎಲ್ಲೆಂದರಲ್ಲಿ ಪೋಸ್ಟರ್ ಹಚ್ಚಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರಕಾಶ್‌ಗೆ ₹ 2 ಸಾವಿರ ದಂಡ ವಿಧಿಸಿದ್ದರು.
ಈ ನಡುವೆ ಕಂದಾಯ ಇಲಾಖೆ ಅಧಿಕಾರಿಗಳು ಕಂದಾಯ ವಸೂಲಿಗೆ ತೆರಳಿದಾಗ ಅತಿಥಿಗೃಹ ಯಾವುದೇ ಪರವಾನಗಿ ಪಡೆಯದೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
₹ 2 ಸಾವಿರ ದಂಡ ವಿಧಿಸಿದ್ದಕ್ಕೆ ಆಕ್ರೋಶಗೊಂಡ ಪ್ರಕಾಶ್, ಫೇಸ್‌ಬುಕ್‌ನಲ್ಲಿ ಭೂಬಾಲನ್ ಅವರ ಬಗ್ಗೆ ಹಗುರವಾಗಿ ಮತ್ತು ವ್ಯಕ್ತಿಗತ ನಿಂದನೆಯ ಬರಹಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ದಂಡ ಕಟ್ಟುವ ಮತ್ತು ಪರವಾನಗಿ ಪಡೆಯುವ ವಿಚಾರದಲ್ಲಿ ‘ಪ್ರಭಾವಿ’ಯೊಬ್ಬರಿಂದ ಪಾಲಿಕೆಯ ಇತರ ಅಧಿಕಾರಿಗಳಿಗೆ ಕರೆ ಮಾಡಿಸಿದ್ದಾರೆ. ಒತ್ತಡ ಹೇರಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿದ್ದಾರೆ. ಅಧಿಕಾರಿಗಳು ಕರ್ತವ್ಯ ನಿರ್ವಹಣೆಗೆ ಅಡ್ಡಿ ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮಂಗಳವಾರ ಆಯುಕ್ತರ ಕಚೇರಿಗೆ ಪ್ರಕಾಶ್ ಅವರನ್ನು ಕರೆಯಿಸಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ‘ನಾನು ನಿಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದೇನೆಯೇ? ಅಕ್ರಮವಾಗಿ ಪಿಜಿ ಆರಂಭಿಸಿದ್ದೀರಿ. ಇದನ್ನು ಕೇಳಿದ್ದು ತಪ್ಪೇ. ದಂಡ ಕಟ್ಟಿ ಎಂದಿದ್ದಕ್ಕೆ ನನ್ನ ಬಗ್ಗೆ ಬಾಯಿಗೆ ಬಂದಂತೆ ಬರಹಗಳನ್ನು ಪ್ರಕಟಿಸಿದ್ದೀರಿ. ನೀವು ಪ್ರಭಾವಿಯಾಗಿದ್ದರೆ ನನ್ನ ಇಲ್ಲಿಂದ ವರ್ಗಾವಣೆ ಮಾಡಿಸಿ’ ಎಂದು ಭೂಬಾಲನ್ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ, ‘ನನ್ನ ಫೇಸ್‌ಬುಕ್ ಖಾತೆಯಿಂದ ಬಿಜೆಪಿ ಯುವ ಮುಖಂಡ ಹನುಮಂತರಾಜು ಅವರೇ ಈ ಬರಹಗಳನ್ನು ಪ್ರಕಟಿಸಿದ್ದಾರೆ’ ಎಂದು ಪ್ರಕಾಶ್ ತಿಳಿಸಿದರು. ಹನುಮಂತ ರಾಜು ಅವರನ್ನೂ ಕಚೇರಿಗೆ ಕರೆಯಿಸಲಾಯಿತು.
ಪರವಾನಗಿ ಪಡೆಯದೆ ಪಿಜಿ ಆರಂಭಿಸಿದ್ದು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ನಿಂದನೆಯ ಬರಹ ಪ್ರಕಟಿಸಿದ ಆರೋಪದ ಮೇಲೆ ಪ್ರಕಾಶ್ ವಿರುದ್ಧ ಪೊಲೀಸರಿಗೆ ದೂರು ನೀಡಲು ಆಯುಕ್ತರು ಮುಂದಾದರು. ಆಗ ಪ್ರಕಾಶ್, ‘ನನ್ನಿಂದ ತಪ್ಪಾಗಿದೆ. ಪಿಜಿ ನಡೆಸಲು ಪರವಾನಗಿ ಪಡೆಯುವೆ. ಕ್ಷಮಾಪಣೆ ಪತ್ರ ಬರೆದುಕೊಡುವೆ’ ಎಂದು ಬೇಡಿಕೊಂಡರು.
ಪಿಜಿ ನಡೆಸಬೇಕಾದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಭದ್ರತೆಗೆ ಸಂಬಂಧಿಸಿದಂತೆ ಪರವಾನಗಿ ಪಡೆಯಬೇಕು, ವಾರ್ಡನ್ ಇರಬೇಕು...ಹೀಗೆ ಅಗತ್ಯ ವಿಚಾರಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಎಚ್ಚರಿಕೆ ನೀಡಿ ಹಾಗೂ ಕ್ರಮಬದ್ಧವಾಗಿ ಪಿಜಿ ನಡೆಸುವಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.