
ಚಿಕ್ಕನಾಯಕನಹಳ್ಳಿ: ‘ಈ ಹಿಂದೆ ಶಾಸಕನಾಗಿದ್ದಾಗ ಮಂಜೂರು ಮಾಡಿದ್ದ ಅಂಬೇಡ್ಕರ್ ಭವನವನ್ನು ಈಗ ಶಾಸಕನಾಗಿ ನಾನೇ ಉದ್ಘಾಟಿಸಿ ಜನರ ಬಳಕೆಗೆ ನೀಡುತ್ತಿರುವುದು ಸಾರ್ಥಕತೆ ತಂದಿದೆ’ ಎಂದು ಶಾಸಕ ಸಿ.ಬಿ. ಸುರೇಶ್ ಬಾಬು ತಿಳಿಸಿದರು.
ತಾಲ್ಲೂಕಿನ ಹಂದನಕೆರೆ ಹೋಬಳಿಯಲ್ಲಿ ಶನಿವಾರ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಲಾದ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಅವಧಿಯಲ್ಲಿ ಈ ಭವನಕ್ಕಾಗಿ ₹50 ಲಕ್ಷ ಅನುದಾನ ಮೀಸಲಿಡಲಾಗಿತ್ತು. ಈಗ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಮತ್ತೆ ₹10 ಲಕ್ಷ ನೀಡಿ ಸುಸಜ್ಜಿತವಾಗಿ ಪೂರ್ಣಗೊಳಿಸಲಾಗಿದೆ. ಈ ಭವನ ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಮನೆ ಕಾರ್ಯಕ್ರಮಗಳಿಗೆ ಅತ್ಯಂತ ಸೂಕ್ತವಾಗಿದೆ ಎಂದರು.
ಹಂದನಕೆರೆ ಹೋಬಳಿಯಲ್ಲಿ ₹3 ಕೋಟಿಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳನ್ನು ಜನಾರ್ಪಣೆ ಮಾಡಲಾಗಿದೆ. ಇದರಲ್ಲಿ ಐದು ನೂತನ ಅಂಗನವಾಡಿ ಕಟ್ಟಡ, ಬಿಸಿಯೂಟದ ಕೊಠಡಿ ಹಾಗೂ ಕಾಲೇಜು ಕಟ್ಟಡಗಳು ಸೇರಿವೆ. ತಾಲ್ಲೂಕಿನಾದ್ಯಂತ ಶಿಕ್ಷಣಕ್ಕೆ ಪೂರಕವಾಗಿ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸುವ ಗುರಿ ಇದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ರಾಮಚಂದ್ರಯ್ಯ, ತಹಶೀಲ್ದಾರ್ ಮಮತಾ, ಸಮಾಜ ಕಲ್ಯಾಣಾಧಿಕಾರಿ ಶ್ರೀಧರಮೂರ್ತಿ, ಕಚೇರಿ ವ್ಯವಸ್ಥಾಪಕ ಆರ್. ಕುಮಾರಸ್ವಾಮಿ, ಹಂದನಕೆರೆ ನಾಗರಾಜು, ತಿಮ್ಮಣ್ಣ, ನಿರ್ಮಿತಿ ಕೇಂದ್ರದ ನವೀನ್, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.