ADVERTISEMENT

ಬುದ್ಧನ ವಿಚಾರಕ್ಕೆ ಪ್ರಭಾವಿತರಾದ ಅಂಬೇಡ್ಕರ್‌: ಬಿ.ಎಸ್.ದಿನೇಶ್

ಡಾ.ಬಿ.ಆರ್.ಅಂಬೇಡ್ಕರ್‌ 62ನೇ ಬೌದ್ಧ ಧರ್ಮ ದೀಕ್ಷಾ ಮಹೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 15:36 IST
Last Updated 14 ಅಕ್ಟೋಬರ್ 2018, 15:36 IST
ಜಿಲ್ಲಾ ಅಖಿಲ ಭಾರತ ಡಾ.ಅಂಬೇಡ್ಕರ್‌ ಪ್ರಚಾರ ಸಮಿತಿಯ ಸದಸ್ಯರು ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಜಿಲ್ಲಾ ಅಖಿಲ ಭಾರತ ಡಾ.ಅಂಬೇಡ್ಕರ್‌ ಪ್ರಚಾರ ಸಮಿತಿಯ ಸದಸ್ಯರು ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ತುಮಕೂರು: ಅಸ್ಪೃಶ್ಯತೆ ಕಾರಣದಿಂಧ ಹಿಂದೂ ಧರ್ಮದ ಬಗ್ಗೆ ಮನನೊಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಚಾರವಾದಿ ಗೌತಮ ಬುದ್ಧನ ವಿಚಾರಗಳಿಂದ ಪ್ರಭಾವಿತರಾದರು. ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ 62 ವರ್ಷಗಳ ಹಿಂದೆಯೇ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಹೊಸ ಚಳವಳಿಗೆ ನಾಂದಿ ಹಾಡಿದರು ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಕಾರ್ಯದರ್ಶಿ ಬಿ.ಎಸ್.ದಿನೇಶ್ ತಿಳಿಸಿದರು.

ನಗರದ ಟೌನ್‌ಹಾಲ್‌ ವೃತ್ತದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್‌ ಪ್ರಚಾರ ಸಮಿತಿ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್‌ ಡಾ.ಬಿ.ಆರ್.ಅಂಬೇಡ್ಕರ್‌ ಅವರ 62ನೇ ಬೌದ್ಧ ಧರ್ಮ ದೀಕ್ಷಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತುಳಿತಕ್ಕೊಳಗಾದ ಸಮುದಾಯಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯಿಂದ ಬೇಸತ್ತಿದ್ದ ಅಂಬೇಡ್ಕರ್, ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿ ನನ್ನ ಜೀವನ ಅಂತ್ಯಗೊಳಿಸಲು ನನಗೆ ಇಷ್ಟವಿಲ್ಲ. ಹಾಗಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿ ಬೌದ್ಧ ಧರ್ಮದ ಮೂಲಕ ಮೋಕ್ಷ ಪಡೆಯುತ್ತೇನೆ ಎಂದು ಹೇಳಿದ ವಿಚಾರಗಳನ್ನು ಕಾರ್ಯಕ್ರಮಗಳಲ್ಲಿ ನೆನೆಪಿಸಿಕೊಂಡರು.

ADVERTISEMENT

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ‘ಬಾಬಾ ಸಾಹೇಬ್ ಅವರು ಅಸ್ಪೃಶ್ಯತೆಯಿಂದ ನೊಂದು ಎಲ್ಲ ಧರ್ಮಗಳ ಬಗ್ಗೆ ಅರಿತು, ಬೌದ್ಧ ಧರ್ಮದಲ್ಲಿದ್ದ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಂಡಿದ್ದರು’ ಎಂದರು.

‘ಹಿಂದೂ ಧರ್ಮದ ಮೇಲು-ಕೀಳು ಎನ್ನುವ ಸಾಮಾಜಿಕ ಅಸಮಾನತೆಯನ್ನು ಹೊಗಲಾಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಿಲ್ಲ ಎನ್ನುವುದನ್ನು ಮನಗಂಡು 14–10–1956ರಲ್ಲಿ ಬೌದ್ಧ ಧರ್ಮ ದೀಕ್ಷೆ ಪಡೆದರು’ ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪಂಗಡದ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣ, ಕೆ.ಗೋವಿಂದರಾಜು, ಸಿ.ಭಾನುಪ್ರಕಾಶ್, ಸಿದ್ದಲಿಂಗಯ್ಯ, ಛಲವಾದಿ ಶೇಖರ್, ಜಿ.ಆರ್.ಸುರೇಶ್, ಮಾರುತಿ ಪ್ರಸಾದ್, ಜಿ.ಆರ್.ಗಿರೀಶ್, ಎನ್.ಬಿ.ಸೋಮಶೇಖರ್ ಹಾಗೂ ಸಮಿತಿಯ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.