ADVERTISEMENT

ಕೊಡಿಗೇನಹಳ್ಳಿ | ಏಲಕ್ಕಿ ಬಾಳೆ: ಏಕರೆಗೆ ₹6 ಲಕ್ಷ ಆದಾಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 2:51 IST
Last Updated 6 ಅಕ್ಟೋಬರ್ 2025, 2:51 IST
ಕೊಡಿಗೇನಹಳ್ಳಿ ಹೋಬಳಿ ತೆರಿಯೂರು ಗ್ರಾಮದ ರೈತ ಟಿ.ಎನ್. ನಾಗಭೂಷಣ್ ಬೆಳೆದಿರುವ ಬಾಳೆಗೊನೆ
ಕೊಡಿಗೇನಹಳ್ಳಿ ಹೋಬಳಿ ತೆರಿಯೂರು ಗ್ರಾಮದ ರೈತ ಟಿ.ಎನ್. ನಾಗಭೂಷಣ್ ಬೆಳೆದಿರುವ ಬಾಳೆಗೊನೆ   

ಕೊಡಿಗೇನಹಳ್ಳಿ: ಹೋಬಳಿಯ ತೆರಿಯೂರು ಗ್ರಾಮದ ರೈತ ಟಿ.ಎನ್. ನಾಗಭೂಷಣ್ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಏಲಕ್ಕಿ ಬಾಳೆ ಬೆಳೆದು ಲಾಭ ಗಳಿಸಿದ್ದಾರೆ.

ನಾಗಭೂಷಣ್ ಎಸ್‌ಎಸ್‌ಎಲ್‌ಸಿ ನಂತರ ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗ ಮಾಡಿದ್ದರು. ಕೋವಿಡ್‌ ಸಂದರ್ಭದಲ್ಲಿ ಗ್ರಾಮಕ್ಕೆ ಮರಳಿದ ಇವರು ಕೃಷಿಯತ್ತ ವಾಲಿದರು.

ತಮ್ಮ ಆರು ಎಕರೆ ಜಮೀನಿನ ಜೊತೆಗೆ 10 ಎಕರೆ ಜಮೀನನ್ನು ಬೋಗ್ಯಕ್ಕೆ ಪಡೆದರು. ಅದರಲ್ಲಿ ಕನಕಾಂಬರ, ಟೊಮೆಟೊ, ಕುರಿ ಸಾಕಾಣಿಕೆಗೆ ಮೆಕ್ಕೆಜೋಳದ ಸಪ್ಪೆ ಬೆಳೆಯುತ್ತಿದ್ದಾರೆ. ನಾಲ್ಕು ಎಕರೆಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಏಲಕ್ಕಿ ಬಾಳೆ ಬೆಳೆಯುತ್ತಿದ್ದಾರೆ. ‘ಗುಂಪು ಬಾಳೆಯಾಗಿರುವುದರಿಂದ ವರ್ಷಪೂರ್ತಿ ಬಾಳೆಗೊನೆ ದೊರೆಯುತ್ತದೆ. ಹಾಗಾಗಿ ಪ್ರತಿವರ್ಷ ಖರ್ಚು ಹೋಗಿ ಎಕರೆಗೆ ₹5ರಿಂದ ₹6 ಲಕ್ಷ ಲಾಭ ದೊರಕುತ್ತಿದೆ’ ಎನ್ನುತ್ತಾರೆ ನಾಗಭೂಷಣ್‌.

ADVERTISEMENT

ನಾಲ್ಕು ವರ್ಷದ ಹಿಂದೆ ಬಾಳೆಗೆಡ್ಡೆ ಖರೀದಿಸಿ ನಾಟಿ ಮಾಡುವ ಸಂದರ್ಭದಲ್ಲಿ ಮೂರು ಅಡಿ ಆಳದ ಕುಣಿಯಲ್ಲಿ ಹೊಂಗೆ, ಎಕ್ಕ ಹಾಗೂ ತಂಗಡೆ ಸೊಪ್ಪನ್ನು ಹಾಕಿಸಿದ್ದೆ. ನಂತರ ಗಿಡಗಳಿಗೆ ಕಡಿಮೆ ರಸಗೊಬ್ಬರದ ಜೊತೆಗೆ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ನೀಡುತ್ತಿರುವುದರಿಂದ ಬಾಳೆ ತೋಟ ಚೆನ್ನಾಗಿ ಬಂದಿದೆ. ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಕೆ.ಜಿಗೆ ₹90ರಿಂದ ₹94 ಇದ್ದ ಬೆಲೆ ಈಗ ಕೆ.ಜಿಗೆ ₹60ಕ್ಕೆ ಇಳಿದಿದೆ. ಈ ವರ್ಷ ಕೆಲವೊಂದು ಬಾಳೆಗೊನೆ 24ರಿಂದ 25 ಕೆಜಿ ವರೆಗೆ ತೂಕ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.