ADVERTISEMENT

₹10 ಸಾವಿರ ಬಿಲ್: ಗ್ರಾಹಕರಿಗೆ ಬೆಸ್ಕಾಂ ‘ಶಾಕ್‌’

ತಿಂಗಳಲ್ಲಿ 1,067 ಯುನಿಟ್‌ ವಿದ್ಯುತ್‌ ಬಳಕೆ!

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 5:59 IST
Last Updated 14 ಫೆಬ್ರುವರಿ 2026, 5:59 IST
ಡಿಸೆಂಬರ್‌ ತಿಂಗಳ ವಿದ್ಯುತ್‌ ಬಿಲ್‌
ಡಿಸೆಂಬರ್‌ ತಿಂಗಳ ವಿದ್ಯುತ್‌ ಬಿಲ್‌   

ತುಮಕೂರು: ನಗರದ ಹನುಮಂತಪುರದ ಮನೆಯೊಂದರ ವಿದ್ಯುತ್‌ ಬಿಲ್‌ ಒಂದೇ ತಿಂಗಳಲ್ಲಿ ಎಂಟತ್ತು ಪಟ್ಟು ಜಾಸ್ತಿಯಾಗಿದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ಸಿ.ಬಸವರಾಜು ಎಂಬುವರ ಮನೆಗೆ ₹10,423 ವಿದ್ಯುತ್‌ ಶುಲ್ಕ ಪಾವತಿಸುವಂತೆ ಫೆ. 3ರಂದು ಬೆಸ್ಕಾಂ ವತಿಯಿಂದ ಬಿಲ್‌ ನೀಡಲಾಗಿದೆ. ವಿದ್ಯುತ್ ಬಳಕೆ ಬಗ್ಗೆ ಸರಿಯಾಗಿ ಲೆಕ್ಕ ಹಾಕದೆ ಒಮ್ಮೆಲೆ ಇಷ್ಟೊಂದು ದೊಡ್ಡ ಮೊತ್ತದ ಬಿಲ್ ನೀಡಿ, ಗ್ರಾಹಕರನ್ನು ಆತಂಕಕ್ಕೆ ದೂಡಲಾಗಿದೆ.

ಅಕ್ಟೋಬರ್‌ ತಿಂಗಳಲ್ಲಿ 198 ಯುನಿಟ್‌, ನವೆಂಬರ್‌ನಲ್ಲಿ 169 ಯುನಿಟ್‌ ವಿದ್ಯುತ್‌ ಬಳಸಲಾಗಿದೆ. ಆದರೆ ಡಿಸೆಂಬರ್‌ ತಿಂಗಳಲ್ಲಿ ಮಾತ್ರ 1,067 ಯುನಿಟ್‌ ವಿದ್ಯುತ್‌ ಬಳಸಿರುವುದಾಗಿ ಬಿಲ್‌ನಲ್ಲಿ ನಮೂದಿಸಲಾಗಿದೆ. ಮತ್ತೆ ಜನವರಿ ತಿಂಗಳಲ್ಲಿ 263 ಯುನಿಟ್‌ ಬಳಸಿದ ಬಗ್ಗೆ ಬಿಲ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಒಂದು ತಿಂಗಳ ಅವಧಿಯಲ್ಲಿ ಇಷ್ಟು ಪ್ರಮಾಣದ ವಿದ್ಯುತ್‌ ಬಳಕೆಯಾಗಲು ಹೇಗೆ ಸಾಧ್ಯ. 200 ಯುನಿಟ್‌ಗೂ ಹೆಚ್ಚು ವಿದ್ಯುತ್‌ ಬಳಕೆ ಮಾಡಿದರೆ ಪ್ರತಿ ಯುನಿಟ್‌ ₹5.80 ಪಾವತಿಸಬೇಕು. 1,067 ಯುನಿಟ್‌ಗೆ ಎಲ್ಲಿಂದ ಹಣ ತಂದು ಕಟ್ಟಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಚೇರಿಗೆ ಅಲೆಯುವಂತಾಗಿದೆ. ಕಚೇರಿಯಲ್ಲಿ ಯಾರೊಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ’ ಎಂದು ಬಸವರಾಜು ಅಳಲು ತೋಡಿಕೊಂಡರು.

‘ಅಧಿಕಾರಿಗಳು ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ. ಹಿಂದಿನ ತಿಂಗಳಲ್ಲಿ ಮೀಟರ್‌ ರೀಡರ್‌ ಸರಿಯಾಗಿ ಕೆಲಸ ನಿರ್ವಹಿಸಿಲ್ಲ. ಹೀಗಾಗಿ ಕಡಿಮೆ ಯುನಿಟ್‌ ತೋರಿಸಿದೆ. ಬಾಕಿ ಇರುವ ಎಲ್ಲ ಯುನಿಟ್‌ ಸೇರಿಸಿ ಈಗ ಬಿಲ್‌ ಮಾಡಲಾಗಿದೆ. ಎಲ್ಲ ಶುಲ್ಕ ಪಾವತಿಸಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಬೆಸ್ಕಾಂ ಸಿಬ್ಬಂದಿ ಮಾಡಿದ ತಪ್ಪಿಗೆ ಅಮಾಯಕ ಜನರಿಗೆ ಬರೆ ಎಳೆಯಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಕಾಲಕ್ಕೆ ಆಯಾ ತಿಂಗಳ ಬಿಲ್‌ ನೀಡಿದ್ದು, ಬಿಲ್ ಮೊತ್ತ ಪಾವತಿಸಲಾಗಿದೆ. ಈಗ ಮತ್ತೆ ಬಾಕಿ ಬಿಲ್‌ ಕಟ್ಟುವಂತೆ ಹೇಳುತ್ತಿದ್ದಾರೆ. ಮನೆಯಲ್ಲಿ ಟಿ.ವಿ, ಗೀಸರ್‌, ಫ್ಯಾನ್‌ ಬಳಕೆ ಮಾಡಲಾಗುತ್ತಿದೆ. ಇಷ್ಟಕ್ಕೆ 1,067 ಯುನಿಟ್‌ ವಿದ್ಯುತ್‌ ಹೇಗೆ ಖರ್ಚಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.

‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ತಪ್ಪಾಗಿರುವ ಬಗ್ಗೆ ಗೊತ್ತಿಲ್ಲ, ಪರಿಶೀಲಿಸಲಾಗುವುದು’ ಎಂದು ಬೆಸ್ಕಾಂ ಸಹಾಯಕ ಎಂಜಿನಿಯರ್ ನಾಗರಾಜ್ ಪ್ರತಿಕ್ರಿಯಿಸಿದರು.

ಜನವರಿ ತಿಂಗಳ ವಿದ್ಯುತ್‌ ಬಿಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.