ADVERTISEMENT

2023ರಲ್ಲಿ ತುಮಕೂರಿನ 8 ಕ್ಷೇತ್ರ ಗೆಲ್ಲಲಿದೆ ಜೆಡಿಎಸ್‌: ಶಾಸಕ ಡಿ.ಸಿ.ಗೌರಿಶಂಕರ್

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 3:08 IST
Last Updated 11 ಜನವರಿ 2021, 3:08 IST
ಶಾಸಕ ಗೌರಿಶಂಕರ್‌
ಶಾಸಕ ಗೌರಿಶಂಕರ್‌   

ತುರುವೇಕೆರೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 8 ಜೆಡಿಎಸ್ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ತುಮಕೂರು ತಾಲ್ಲೂಕು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ತಾಲ್ಲೂಕು ಘಟಕ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭ ದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಜೆಡಿಎಸ್ ಪಾಳಯದಲ್ಲಿ ಯಾವುದೇ ಗೊಂದಲವಿಲ್ಲ. ಮುಂದಿನ ಚುನಾವಣೆಯಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಒಳಗೊಂಡಂತೆ ಎಲ್ಲರೂ ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದೇವೆ ಎಂದರು.

ADVERTISEMENT

ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಕೇವಲ ₹3 ಕೋಟಿ ಅನುದಾನ ನೀಡಿದೆ. ಕ್ಷೇತ್ರದ ಅಭಿವೃದ್ದಿಗೆ ಹಣವಿಲ್ಲದೆ ಸರ್ಕಾರ ದಿವಾಳಿಯಾಗಿದೆ ಎಂದರು.

ಬಿಜೆಪಿಯೊಂದಿಗೆ ಮೈತ್ರಿ ಇಲ್ಲ

ದೇಶದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಒಂದು ಚಾರಿತ್ರಿಕವಾದ ಹಿನ್ನಲೆ ಹಾಗೂ ಜನಾಭಿಮಾನವಿದೆ. ಹೀಗಿರುವಾಗ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಹಾಗೂ ವಿಲೀನ ಮಾಡಿಕೊಳ್ಳುವುದು ಸತ್ಯಕ್ಕೆ ದೂರವಾದದು ಎಂದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪಿಯಲ್ಲಿ 309 ಜೆಡಿಎಸ್ ಬೆಂಬಲಿತ ಗ್ರಾ.ಪಂ ಸದಸ್ಯರು ಆಯ್ಕೆಯಾಗಿದ್ದು, ಕೆಲವರನ್ನು ಅಧ್ಯಕ್ಷ- ಉಪಾಧ್ಯಕ್ಷರನ್ನಾಗಿ ಮಾಡುವುದಾಗಿ ಶಾಸಕ ಮಸಾಲಜಯರಾಂ ಆಮಿಷ ಒಡ್ಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರೇಶ್ ಮಾತನಾಡಿ, ‘ಬಿಜೆಪಿ ಹಣ ಬಲದಿಂದ ಅಧಿಕಾರ ಹಿಡಿಯಲು ಹವಣಿಸಿದರೆ ನಮ್ಮ ಪಕ್ಷಕ್ಕೆ ರೈತರೇ ಆಸ್ತಿಯಾಗಿದ್ದಾರೆ’ ಎಂದರು.

ಸಮಾರಂಭದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸ್ವಾಮಿ, ಮುಖಂಡರಾದ ಮಧುಸೂಧನ್, ವಿಜಯೇಂದ್ರ, ವೆಂಕಟಾಪುರ ಯೋಗೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.