ತುಮಕೂರು: ಲಂಚ ಪಡೆದು ಸಿಕ್ಕಿಬಿದ್ದಿದ್ದ ಜಿಲ್ಲಾ ಆಸ್ಪತ್ರೆಯ ಹಿರಿಯ ಫಾರ್ಮಸಿ ಅಧಿಕಾರಿ ಜಿ.ಎನ್.ಗಂಗಾಧರ್ ಎಂಬಾತನಿಗೆ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹2,500 ದಂಡ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಲಂಚ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿ ಗಂಗಾಧರ್‌ನನ್ನು ಬಂಧಿಸಿದ್ದರು.
ಕುಣಿಗಲ್ ತಾಲ್ಲೂಕು ರಂಗಮ್ಮನಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಂ.ಎನ್.ಹನುಮಂತರಾಜು ಪತ್ನಿ ಎನ್.ಪರಿಮಳ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು, ಚಿಕಿತ್ಸೆಗೆ ಖರ್ಚು ಮಾಡಿದ್ದ ವೆಚ್ಚ ₹1,03,296 ಮರು ಪಾವತಿ ಮಾಡಿಕೊಡುವಂತೆ ಕೋರಿ ಕುಣಿಗಲ್ ಬಿಇಒಗೆ ಹನುಮಂತರಾಜು ಮನವಿ ಸಲ್ಲಿಸಿದ್ದರು.
ವೈದ್ಯಕೀಯ ವೆಚ್ಚದ ಬಿಲ್‌ಗಳನ್ನು ಸಿಬಿಎಸ್ ದರದಲ್ಲಿ ಅರ್ಹತಾ ಮೊತ್ತ ನಿಗದಿಗೊಳಿಸಿ ಕೊಡುವಂತೆ ಕೋರಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗೆ ಬಿಇಒ ಕಳುಹಿಸಿದ್ದರು. ಆಸ್ಪತ್ರೆಯಲ್ಲಿ ಹಿರಿಯ ಫಾರ್ಮಸಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗಂಗಾಧರ್ ಬಿಲ್‌ಗೆ ಒಪ್ಪಿಗೆ ನೀಡಲು ₹2,500 ಲಂಚಕ್ಕೆ ಒತ್ತಾಯಿಸಿದ್ದರು.
ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರಿಗೆ ಹನುಮಂತರಾಜು ದೂರು ಸಲ್ಲಿಸಿದ್ದು, 2020 ಆಗಸ್ಟ್ 28ರಂದು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದರು. ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಇಮ್ರಾನ್ ಬೇಗ್, ವೈ.ಸತ್ಯನಾರಾಯಣ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಾಸ್ಮಿನ ಪರವೀನ ಲಾಡಖಾನ ಅವರು ಆರೋಪ ಸಾಬೀತಾಗಿದ್ದರಿಂದ ಶಿಕ್ಷೆ ವಿಧಿಸಿದ್ದಾರೆ. ಲೋಕಾಯುಕ್ತ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಆರ್.ಪಿ.ಪ್ರಕಾಶ್ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.