ADVERTISEMENT

ಚಿಕ್ಕನಾಯಕನಹಳ್ಳಿ | ಬಸ್‌ ಕೊರತೆ: ಪ್ರಯಾಸದ ಪ್ರಯಾಣ

ಸಕಾಲಕ್ಕೆ ಶಾಲೆ, ಕಾಲೇಜುಗಳಿಗೆ ತೆರಳಲು ಅಗತ್ಯದಷ್ಟು ಬಸ್‌ಗಳಿಲ್ಲದೆ ಪಡಿಪಾಟಲು

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 6:56 IST
Last Updated 8 ಜನವರಿ 2024, 6:56 IST
ಚಿಕ್ಕನಾಯಕನಹಳ್ಳಿ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತುತ್ತಿರುವ ಪ್ರಯಾಣಿಕರು
ಚಿಕ್ಕನಾಯಕನಹಳ್ಳಿ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತುತ್ತಿರುವ ಪ್ರಯಾಣಿಕರು   

ಚಿಕ್ಕನಾಯಕನಹಳ್ಳಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ನಿರ್ಲಕ್ಷ್ಯಕ್ಕೆ ಒಳಗಾಗಿರುವ ತಾಲ್ಲೂಕಿನ ಜನತೆ ಬಸ್‌ ಸೌಕರ್ಯಕ್ಕಾಗಿ ಕಾಯುವಿಕೆಗೆ ಮುಕ್ತಿ ದೊರೆತಿಲ್ಲ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಕಾಲಕ್ಕೆ ಶಾಲೆ, ಕಾಲೇಜುಗಳಿಗೆ ತೆರಳಲು ಅಗತ್ಯದಷ್ಟು ಬಸ್‌ಗಳಿಲ್ಲ. ಜಿಲ್ಲಾ ಕೇಂದ್ರ ತುಮಕೂರು, ರಾಜಧಾನಿ ಬೆಂಗಳೂರಿಗೆ ತಾಲ್ಲೂಕು ಕೇಂದ್ರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಇಲ್ಲದೆ ನಿತ್ಯ ನೂರಾರು ಜನ ಪಡಿಪಾಟಲು ಅನುಭವಿಸುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಮುಂಜಾನೆ 6ರಿಂದ ರಾತ್ರಿ 8ರವರೆಗೆ 50ಕ್ಕೂ ಹೆಚ್ಚು ಬಸ್‌ಗಳು ಹೊಸದುರ್ಗದಿಂದ ಬೆಂಗಳೂರು ಕಡೆಗೆ ಚಲಿಸುತ್ತವೆ. ಅವು ಇಲ್ಲಿನ ನಿಲ್ದಾಣಕ್ಕೆ ಬರುವಷ್ಟರಲ್ಲಿ ಜನರಿಂದ ತುಂಬಿರುತ್ತವೆ. ಬೆಳಿಗ್ಗೆ 10.30ರೊಳಗೆ ಸಂಜೆ 4ರ ನಂತರ ಬಸ್‌ನಲ್ಲಿ ಕಾಲಿಡಲು ಜಾಗವಿಲ್ಲದೆ ಪ್ರಯಾಣಿಕರು ಹತ್ತುವುದೇ ಕಷ್ಟವಾಗುತ್ತದೆ.

ADVERTISEMENT

ಜನದಟ್ಟಣೆಯಿಂದ ತುಂಬಿದ ಬಸ್‌ ಹತ್ತಲಾಗದೆ ಮತ್ತೊಂದಕ್ಕೆ ಕಾಯುತ್ತ ಕೂತವರಿಗೆ ನಿರಾಶೆ ತಪ್ಪಿದ್ದಲ್ಲ. ಒಂದರ ಹಿಂದೆ ಒಂದರಂತೆ ಬರುವ ಬಸ್‌ಗಳನ್ನು ನೋಡಿ ಸಾಕಾಗಿ ಕೊನೆಗೆ ದಟ್ಟಣೆಯ ಬಸ್‌ ಅನ್ನೇ ಸಾಹಸಪಟ್ಟು ಏರಿ ಪ್ರಯಾಣಿಸದೇ ವಿಧಿಯಿಲ್ಲ.

ಮುಂದಿನ ನಿಲ್ದಾಣಗಳಲ್ಲಿ ಸೀಟು ಸಿಗಬಹುದೆಂಬ ಆಶಾಭಾವನೆಯೊಂದಿಗೆ ಕಷ್ಟಪಟ್ಟು ಬಸ್‌ ಏರಿ ಹೊರಟವರಿಗೆ ಗುಬ್ಬಿ, ತುಮಕೂರು ದಾಟಿದರೂ ಸೀಟು ಖಾಲಿಯಾಗುವುದು ದುರ್ಲಬ. ಹೀಗಾಗಿ ಎಷ್ಟೋ ಸಲ ಬೆಂಗಳೂರಿನವರೆಗೂ ನಿಂತೇ ಪ್ರಯಾಣಿಸುವುದು ಅನಿವಾರ್ಯ.

ತಾಲ್ಲೂಕಿನ ರಾಮನಹಳ್ಳಿ, ಬೆಳಗುಲಿ ಗ್ರಾಮದಲ್ಲಿ ರಾತ್ರಿ ತಂಗಿ ಮುಂಜಾನೆ ರಾಜಧಾನಿಗೆ ವಾಪಸ್ಸಾಗುವ ಎರಡು ಬಸ್‌ಗಳನ್ನು ಬಿಟ್ಟರೆ ಚಿಕ್ಕನಾಯಕನಹಳ್ಳಿಯಿಂದ ಒಂದು ಬಸ್‌ ಕೂಡ ಹೊರಡುವ ವ್ಯವಸ್ಥೆ ಇಲ್ಲ. ವಾರಾಂತ್ಯ, ಹಬ್ಬದ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗುತ್ತದೆ. ಬ್ಯಾಗ್‌ ಹಾಗೂ ಪುಟ್ಟ ಮಕ್ಕಳೊಂದಿಗೆ ಪ್ರಯಾಣಿಸುವುದು ದುಸ್ಸಾಹಸವೇ ಆಗಿರುತ್ತದೆ.

ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ. ಯಾವುದೇ ಮನವಿಗೂ ಸ್ಪಂದಿಸುತ್ತಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

ಶಾಲೆ, ಕಾಲೇಜು, ಕಚೇರಿ ಸಿಬ್ಬಂದಿ ತುಮಕೂರು ಮತ್ತಿತರ ಕಡೆಗಳಿಂದ ಚಿಕ್ಕನಾಯಕನಹಳ್ಳಿಗೆ ನಿತ್ಯ ಪ್ರಯಾಣಿಸುತ್ತಾರೆ. ಕಿಕ್ಕಿರಿದ ಬಸ್‌ಗಳಲ್ಲೇ ಅವರ ಪ್ರಯಾಣ. ಮೊದಲೇ ಇದ್ದ ಈ ಸಮಸ್ಯೆ ‘ಶಕ್ತಿ’ ಯೋಜನೆ ಜಾರಿ ನಂತರ ಮತ್ತಷ್ಟು ಬಿಗಡಾಯಿಸಿದೆ.

ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣವಾದರೆ ಎಲ್ಲ ಸಂಚಾರ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ಭಾವಿಸಲಾಗಿತ್ತು. ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಡಿಪೋಗೆ ಭೂಮಿಪೂಜೆಯನ್ನೂ ನೆರವೇರಿಸಿದ್ದರು. ವರ್ಷದಿಂದ ಕಾಮಗಾರಿ ನಡೆಯುತ್ತಲೇ ಇದೆ. ಯಾವಾಗ ಕಾಮಗಾರಿ ಪೂರ್ಣಗೊಂಡು ಬಸ್‌ ಸಮಸ್ಯೆಗೆ ಮುಕ್ತಿ ಸಿಗುತ್ತದೆಯೊ ಎಂದು ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದಾರೆ.

ಕುಮಾರಯ್ಯ
ಕೃಷ್ಣೇಗೌಡ
ಚಿದಾನಂದ್‌
ರುದ್ರಮ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.