
ತಿಪಟೂರು: ತಾಲ್ಲೂಕಿನಲ್ಲಿ ಪ್ರಯಾಣಿಕರ ತಂಗುದಾಣಗಳ ಕೊರತೆ ಮತ್ತು ಅವ್ಯವಸ್ಥೆ ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡುತ್ತಿದೆ.
ನಗರಕ್ಕೆ ಸಂಪರ್ಕಿಸುವ ಹುಳಿಯಾರು, ಅರಸೀಕೆರೆ, ಹಾಸನ ಮಾರ್ಗಗಳನ್ನು ಒಳಗೊಂಡಂತೆ ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಚನ್ನರಾಯಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಜೊತೆಗೆ ಹಲವು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಮುಂದಾದರೂ ತಂಗುದಾಣಗಳ ನಿರ್ವಹಣೆಯಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ.
ಬಹುತೇಕ ಕಡೆ ಗಿಡಗಂಟಿ, ಕಸದ ರಾಶಿಯಿಂದ ಆವೃತ್ತವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಇದೆ. ತಂಗುದಾಣಗಳ ಸುತ್ತ ಹಾಗೂ ಒಳಗಡೆ ಅನಪೇಕ್ಷಿತ ವಸ್ತು ಹಾಗೂ ಗಿಡಗಂಟೆಗಳಿಂದ ಮರೆಯಾಗಿದ್ದು ಅನೈತಿಕ ಚಟುವಟಿಕೆಗಳಿಗೆ ತಾಣವಾಗಿವೆ.
ಸಂಜೆ ನಂತರ ಅನೇಕ ತಂಗುದಾಣಗಳಲ್ಲಿ ಮದ್ಯಪಾನ, ಜೂಜು ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಮದ್ಯದ ಬಾಟಲಿ, ಬೀಡಿ, ಸಿಗರೇಟ್‌ನ ತುಂಡುಗಳು ಕಾಣಸಿಗುತ್ತವೆ. ಇನ್ನು ಕೆಲವೆಡೆ ತಂಗುದಾಣಗಳೇ ಇಲ್ಲ. ಮಳೆ, ಗಾಳಿ, ಬಿಸಿಲಿಗೆ ಪ್ರಯಾಣಿಕರು ಮರದ ನೆರಳನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ.
ಶಾಸಕ ಕೆ.ಷಡಕ್ಷರಿ ಅವರ ಸ್ವಗ್ರಾಮ ಕಲ್ಲೇಗೌಡನಪಾಳ್ಯದಲ್ಲಿಯೇ ಪ್ರಯಾಣಿಕರ ತಂಗುದಾಣವಿಲ್ಲದೆ ಜನರು ಮರದ ಕೆಳಗೆ ಕುಳಿತು ಬಸ್‌ಗಾಗಿ ಕಾಯುವ ಅನಿವಾರ್ಯ ಇದೆ.
ನಗರದ ಒಳಭಾಗದಲ್ಲಿಯೂ ಪ್ರಯಾಣಿಕರ ನಿಲ್ದಾಣ ಹಾಗೂ ನಗರದಿಂದ ಹೊರ ಹೋಗುವ ಬಸ್‌ಗಳು ನಿಲ್ಲುವ ಸ್ಥಳಗಳಲ್ಲಿಯೂ ತಂಗುದಾಣಗಳ ಕೊರತೆಯಿದ್ದು ಗೋವಿನಪುರ, ಅಣ್ಣಾಪುರ ಗೇಟ್, ಶಿವಕುಮಾರಸ್ವಾಮಿ ವೃತ್ತ (ಹಾಸನ ವೃತ್ತ), ತುರವೇಕೆರೆಗೆ ಹೋಗುವ ಮಾರ್ಗಗಳಲ್ಲಿ ತಂಗುದಾಣಗಳು ಇಲ್ಲದೆ ಅಕ್ಕಪಕ್ಕದ ಮಳಿಗೆಗಳನ್ನು ಆಶ್ರಯಿಸಬೇಕಿದೆ.
ಶಾಸಕರ, ಸಂಸದರ, ವಿಧಾನ ಪರಿಷತ್ತಿನ ಸದಸ್ಯರ ಅನುದಾನಗಳು ಯಾವ ಕಡೆಯಲ್ಲಿ ಸದುಪಯೋಗವಾಗಿದೆ ಎಂಬುದು ಸಹ ಸಾರ್ವಜನಿಕರ ಪ್ರಶ್ನೆ.
ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಕಾಪಾಡಬೇಕಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸಾರಿಗೆ ಇಲಾಖೆ, ತಾಲ್ಲೂಕು ಆಡಳಿತ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಂಗುದಾಣಗಳನ್ನು ಸ್ವಚ್ಛಗೊಳಿಸಿ, ಬೆಳಕು, ಕುಡಿಯುವ ನೀರು, ಆಸನ ವ್ಯವಸ್ಥೆ ಒದಗಿಸುವ ಜೊತೆಗೆ ಅಗತ್ಯವಿರುವೆಡೆ ಹೊಸ ತಂಗುದಾಣಗಳನ್ನು ನಿರ್ಮಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಗುದಾಣಗಳಲ್ಲಿ ಸ್ವಚ್ಛತೆ ಕಾಪಾಡಲು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲು ಈಗಾಗಲೇ ಪಿಡಿಒ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಚ್.ಎಂ. ಸುದರ್ಶನ್ ತಾ.ಪಂ. ಇಒ ನಗರದಲ್ಲಿ ಈಗಾಗಲೇ ತಂಗುದಾಣಗಳ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರ ಅಭಿಪ್ರಾಯದಂತೆ ಬದಲಾವಣೆ ಮಾಡಲಾಗಿದೆ. ನಗರಕ್ಕೆ ಹಲವು ಹೊಸ ಯೋಜನೆ ಜಾರಿಯಲ್ಲಿದ್ದು ಶಾಸಕರ ಅನುಮತಿಯೊಂದಿಗೆ ಹೊಸ ತಂಗುದಾಣ ನಿರ್ಮಿಸಲಾಗುವುದು. ವಿಶ್ವೇಶ್ವರ ಬದರಗಡೆ ಪೌರಯುಕ್ತ ಸರ್ಕಾರಗಳು ಬದಲಾಗುತ್ತಿವೆ. ಘೋಷಣೆಗಳು ಬದಲಾಗುತ್ತಿವೆ ಆದರೆ ಪ್ರಯಾಣಿಕರ ತಂಗುದಾಣಗಳ ಸ್ಥಿತಿ ಬದಲಾಗಿಲ್ಲ. ಸ್ಥಳೀಯ ಆಡಳಿತ ಜವಾಬ್ದಾರಿಯಿಂದ ದೂರ ಸರಿದಿವೆ. ಬಸವರಾಜು ಮಠದಮನೆ ಹಾಲ್ಕುರಿಕೆ ಗ್ರಾ.ಪಂ. ಸದಸ್ಯ ತಂಗುದಾಣಗಳ ಗಿಡಗಂಟಿ ತೆರವು ಶುದ್ಧತೆ ಆಸನ ನೆರಳು ಸುರಕ್ಷತೆ ಐಷಾರಾಮಿ ವಸ್ತುಗಳಲ್ಲ ಮೂಲಭೂತ ಅಗತ್ಯಗಳು. ಇವುಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಮೋಹನ್‌ಸಿಂಗಿ ನಿಲ್ಲಲು ಶಕ್ತಿಯಿಲ್ಲದ ವಯಸ್ಸಿನಲ್ಲಿ ಪ್ರಯಾಣದ ಸಮಯದಲ್ಲಿ ಆಸನವಿಲ್ಲದೆ ರಸ್ತೆ ಬದಿಯಲ್ಲಿ ನಿಂತು ಕಾಯಬೇಕಿದೆ. ತಂಗುದಾಣವಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಚನ್ನಪ್ಪ ಈಡೇನಹಳ್ಳಿ ತಂಗುದಾಣಗಳು ಸುರಕ್ಷಿತವಾಗಿದ್ದರೆ ಅಲ್ಲಿಯೇ ಕೆಲಕಾಲ ವಿಶ್ರಾಂತಿ ಪಡೆಯಬಹುದು. ತಾಲ್ಲೂಕಿನಲ್ಲಿ ತಂಗುದಾಣಗಳು ಅವ್ಯವಸ್ಥೆಯಿಂದ ಕೂಡಿವೆ. ಗೋಡೆಗಳಿಗೆ ಬಣ್ಣದ ಚಿತ್ತಾರ ಮಾಡಿ ಆಕರ್ಷಕಗೊಳಿಸಬೇಕು. ಸದಾಶಿವಯ್ಯ ಕೃಷಿಕ ಸಮಾಜದ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.