
ತುಮಕೂರು: ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ (ಎಸ್‌ಎಸ್‌ಐಟಿ) ಆವರಣ ಶನಿವಾರ ಚಿಣ್ಣರಿಂದ ತುಂಬಿತ್ತು. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸಂಸ್ಥಾಪಕ ದಿ.ಎಚ್.ಎಂ.ಗಂಗಾಧರಯ್ಯ ಸ್ಮರಣಾರ್ಥ ಆಯೋಜಿಸಿದ್ದ ಚಿತ್ರ ಬಿಡಿಸುವ ಸ್ಪರ್ಧೆ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಯಿತು.
ಮಕ್ಕಳು ಪುಟಾಣಿ ಕೈಗಳಿಂದ ತಮ್ಮ ಕಲ್ಪನೆಯ ಪ್ರಪಂಚಕ್ಕೆ ಜೀವ ತುಂಬಿದರು. ಸೂರ್ಯೋದಯಕ್ಕೂ ಮುನ್ನವೇ ಆವರಣ ತಲುಪಿ, ಬಿಳಿ ಹಾಳೆಯ ಮೇಲೆ ಚಿತ್ರ ಗೀಚಲು ಕುಳಿತರು. ನಾನಾ ಬಗೆಯ ಚಿತ್ರಗಳು ಮೂಡಿ ಬಂದವು. ಚಿತ್ರಕಲೆ ಕಲಾವಿದ ಸುರೇಶ್‌ಬಾಬು ದಿ.ಸಾಲುಮರದ ತಿಮ್ಮಕ್ಕ ಅವರ ಚಿತ್ರ ಬಿಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.
ಸ್ಪರ್ಧೆಯಲ್ಲಿ 120 ಶಾಲೆಯ 5,700 ಮಕ್ಕಳು ಪಾಲ್ಗೊಂಡಿದ್ದರು. ನರ್ಸರಿ ಮಕ್ಕಳು ತಮಗೆ ಇಷ್ಟವಾದ ಚಿತ್ರ ಗೀಚಿದರು. 1ರಿಂದ 4ನೇ ತರಗತಿಯವರು ‘ನನ್ನ ಕನಸಿನ ತೋಟ’, 5ರಿಂದ 7ನೇ ತರಗತಿ ಮಕ್ಕಳು ತಮ್ಮ ಕಲ್ಪನೆಯ ‘ಕಾರ್ಟೂನ್ ಪಾತ್ರ’, 8ರಿಂದ 10ನೇ ತರಗತಿ ಮಕ್ಕಳು ‘ನನ್ನ ಕನಸಿನ ರಸ್ತೆ’, ಕಾಲೇಜು ವಿದ್ಯಾರ್ಥಿಗಳು ‘ತಂತ್ರಜ್ಞಾನ ಮತ್ತು ಪರಿಸರ’ದ ಕುರಿತು ಚಿತ್ರ ಬಿಡಿಸಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡಪ್ಪ, ಸಾಹೇ ವಿ.ವಿ ಕುಲಸಚಿವ ಅಶೋಕ್ ಮೆಹ್ತಾ, ಪರೀಕ್ಷಾಂಗ ನಿಯಂತ್ರಕ ಗುರುಶಂಕರ್, ಎಸ್‌ಎಸ್‌ಐಟಿ ಪ್ರಾಂಶುಪಾಲ ಎಂ.ಎಸ್.ರವಿಪ್ರಕಾಶ, ಸಾಹೇ ವಿ.ವಿ ಕುಲಾಧಿಪತಿ ಸಲಹೆಗಾರ ವಿವೇಕ್ ವೀರಯ್ಯ, ಸಿದ್ಧಾರ್ಥ ಸ್ಕೂಲ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಸಂಜೀವ್‌ಕುಮಾರ್, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಶಿವರಾಜು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.