ADVERTISEMENT

ತಿಪಟೂರು: ನಫೆಡ್‍ಗೆ ಬಾರದ ಕೊಬ್ಬರಿ

ನಫೆಡ್ ಮೂಲಕ ಕೊಬ್ಬರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕ ನಾಗೇಶ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 7:52 IST
Last Updated 23 ಜುಲೈ 2020, 7:52 IST
ತಿಪಟೂರಿನಲ್ಲಿ ನಫೆಡ್ ಕೇಂದ್ರ ಉದ್ಘಾಟನೆ ಮಾಡಿದ ಶಾಸಕ ಬಿ.ಸಿ.ನಾಗೇಶ್
ತಿಪಟೂರಿನಲ್ಲಿ ನಫೆಡ್ ಕೇಂದ್ರ ಉದ್ಘಾಟನೆ ಮಾಡಿದ ಶಾಸಕ ಬಿ.ಸಿ.ನಾಗೇಶ್   

ತಿಪಟೂರು: ನಫೆಡ್‍ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ ರೈತರಿಗೆ ದಿನಾಂಕ ನಿಗದಿ ಮಾಡಿ ಕೊಬ್ಬರಿ ತರುವಂತೆ ಹೇಳಿದ್ದರೂ ಮೊದಲನೆಯ ದಿನ ಯಾವೊಬ್ಬ ರೈತರು ಬಾರದೆ ಇರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

ನಫೆಡ್ ಪ್ರಾರಂಭಿಸಲು ಸಹಾಸ ಮಾಡಿದ ಅಧಿಕಾರಿಗಳು ಇದೀಗ ರೈತರನ್ನು ಖರೀದಿ ಕೇಂದ್ರಕ್ಕೆ ಸೆಳೆಯಲು ಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಬೆಳಗಿನಿಂದ ಕಾದು ಸಂಜೆ ಖಾಲಿ ಗೋಡೌನ್‍ಗೆ ಬೀಗ ಹಾಕಿ ಹೋದರು.

ಕೇಂದ್ರಕ್ಕೆ ಚಾಲನೆ: ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಫೆಡ್ ಮೂಲಕ ಕೊಬ್ಬರಿ ಖರೀದಿ ಕೇಂದ್ರಕ್ಕೆ ಶಾಸಕ ಬಿ.ಸಿ.ನಾಗೇಶ್ ಚಾಲನೆ ನೀಡಿದರು.

ADVERTISEMENT

ಬಳಿಕ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಉಂಡೆ ಕೊಬ್ಬರಿಗೆ ಬಂಬಲ ಬೆಲೆಯನ್ನು ಹೆಚ್ಚಿಸಿದ್ದು, ಶೀಘ್ರವೇ ರಾಜ್ಯಸರ್ಕಾರದಿಂದ ಪ್ರೋತ್ಸಾಹಧನ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಕೊರೊನಾದಿಂದ ಕೊಬ್ಬರಿ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಕೇಂದ್ರ ಸರ್ಕಾರದಿಂದ ರೈತರಿಗೆ ಅನುಕೂಲವಾಗುವಂತೆ ನಫೆಡ್ ಮೂಲಕ ಕ್ವಿಂಟಲ್‍ಗೆ ₹10,300ರಂತೆ ಖರೀದಿಗೆ ಮುಂದಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದಿಂದ ಸಹಾಯಧನ ನೀಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಎಪಿಎಂಸಿ ಉಪಾಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ, ‘ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಒತ್ತಡ ತರಬೇಕಿದೆ. ರೈತರೆಲ್ಲರೂ ಆರ್ಥಿಕ ಸಂಕಷ್ಟದಲ್ಲಿದ್ದು, ಕೊಬ್ಬರಿಯನ್ನೇ ನಂಬಿ ಕೂತವರಿಗೆ ನಷ್ಟವಾಗಬಾರದು. ಜತೆಗೆ ನಫೆಡ್‍ಗೆ ಕೊಬ್ಬರಿ ತಂದ 48 ಗಂಟೆ ಒಳಗಾಗಿ ರೈತರಿಗೆ ಹಣ ಸಂದಾಯ ಆಗುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

ನಫೆಡ್ ಶಾಖಾ ವ್ಯವಸ್ಥಾಪಕ ಟಿ.ಸಿ.ಅಜಯ್, ದಂಡೇಗೌಡ, ಕಿರಣ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.