ADVERTISEMENT

ಕಾಂಗ್ರೆಸ್ ಸರ್ಕಾರದಲ್ಲೂ ಹೆಚ್ಚಿದ ಕಮಿಷನ್: ಆರ್.ಮಂಜುನಾಥ್ ಆರೋಪ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 18:23 IST
Last Updated 24 ಫೆಬ್ರುವರಿ 2026, 18:23 IST
ಆರ್.ಮಂಜುನಾಥ್
ಆರ್.ಮಂಜುನಾಥ್   

ತುಮಕೂರು: ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಇಲ್ಲಿ ಮಂಗಳವಾರ ಆರೋಪಿಸಿದರು.

ಒಂದೆರಡು ಇಲಾಖೆಗಳನ್ನು ಹೊರತುಪಡಿಸಿದರೆ ಬಹುತೇಕ ಇಲಾಖೆಗಳಲ್ಲಿ ಜ್ಯೇಷ್ಠತೆ ಆಧಾರದ ಮೇಲೆ ಬಿಲ್ ಹಣ ಬಿಡುಗಡೆ ಮಾಡುತ್ತಿಲ್ಲ. ಈಗಿನ ಸರ್ಕಾರದಲ್ಲೂ ಕಮಿಷನ್ ತೆಗೆದುಕೊಳ್ಳುವ ಪ್ರಮಾಣ ಅಧಿಕವಾಗಿದೆ. ಸಂಘದ ಹಿಂದಿನ ಅಧ್ಯಕ್ಷರು ಕಮಿಷನ್ ಬಗ್ಗೆ ಹೇಳಿದ್ದರಿಂದ ಗುತ್ತಿಗೆದಾರರು ಸಮಸ್ಯೆ ಎದುರಿಸಬೇಕಾಯಿತು. ಸತ್ಯ ಹೇಳಿದ್ದರಿಂದ ಸರ್ಕಾರ ಕಿರುಕುಳ ನೀಡುವುದು ಹೆಚ್ಚಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಎರಡೂವರೆ ವರ್ಷಗಳಿಂದ ಗುತ್ತಿಗೆದಾರರಿಗೆ ಸಕಾಲಕ್ಕೆ ಬಿಲ್ ಹಣ ಬಿಡುಗಡೆ ಮಾಡದೆ, ₹37 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ. ಸಾಲದ ಸುಳಿಗೆ ಸಿಲುಕಿದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಾಕಿ ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 6ರಂದು ಬೆಂಗಳೂರಿನ ಸ್ವಾಂತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸ್ಪಂದಿಸಿ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ಏಪ್ರಿಲ್‌ನಿಂದ ರಾಜ್ಯದಾದ್ಯಂತ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಈವರೆಗೂ ಮುಷ್ಕರಕ್ಕೆ ಮುಂದಾಗಿರಲಿಲ್ಲ. ಇತ್ತೀಚೆಗೆ ರಾಜ್ಯದಲ್ಲಿ ಸಾಲ ಬಾಧೆಯಿಂದ 16 ಮಂದಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2.50 ಲಕ್ಷ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯುವಂತೆ ಸರ್ಕಾರ ಮಾಡಿದೆ ಎಂದು ಹೇಳಿದರು.

ಹಣಕಾಸು ಸಚಿವರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಪ್ಯಾಕೇಜ್ ಟೆಂಡರ್ ರದ್ದುಪಡಿಸಲಾಗುವುದು ಎಂದು ಹೇಳುತ್ತಿದ್ದರು. ಅವರು ಅಧಿಕಾರಕ್ಕೆ ಬಂದ ನಂತರ ಇದನ್ನು ಮುಂದುವರಿಸಿದ್ದು, ಇದರಿಂದ ಸಣ್ಣ, ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಹೊರ ರಾಜ್ಯದ ಗುತ್ತಿಗೆದಾರರಿಗೆ ನೆರವಾಗಿದೆ. ರಾಜ್ಯದಲ್ಲಿ ಮೊದಲು ಪ್ಯಾಕೇಜ್ ಟೆಂಡರ್ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ.ಬಲರಾಮಯ್ಯ, ಕಾರ್ಯದರ್ಶಿ ಎಸ್.ಪಿ.ಸುರೇಶ್‌ಕುಮಾರ್, ಸಂಘದ ಪದಾಧಿಕಾರಿಗಳಾದ ಹನುಮಂತಯ್ಯ, ಸಿ.ಡಿ.ಕೃಷ್ಣ, ಎಂ.ರಮೇಶ್, ಶ್ರೀನಿವಾಸ್, ಹೇಮಂತ್, ಹನುಮಂತರಾಜು, ಹರೀಶ್, ರವಿ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ₹1850 ಕೋಟಿ ಬಾಕಿ
ತುಮಕೂರು ಜಿಲ್ಲೆಯಲ್ಲೇ ಗುತ್ತಿಗೆದಾರರಿಗೆ ₹1850 ಕೋಟಿ ಬಾಕಿ ನೀಡಬೇಕಿದೆ ಎಂದು ಆರ್.ಮಂಜುನಾಥ್ ತಿಳಿಸಿದರು. ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ₹8370 ಕೋಟಿ ಜಲಸಂಪನ್ಮೂಲ ₹13 ಸಾವಿರ ಕೋಟಿ ಗ್ರಾಮೀಣಾಭಿವೃದ್ಧಿ ₹3800 ಕೋಟಿ ಸಣ್ಣ ನೀರಾವರಿ ₹3 ಸಾವಿರ ಕೋಟಿ ನಗರಾಭಿವೃದ್ಧಿ ₹2 ಸಾವಿರ ಕೋಟಿ ವಸತಿ ₹2600 ಕಾರ್ಮಿಕ ಇಲಾಖೆ ₹2 ಸಾವಿರ ಕೋಟಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1600 ಕೋಟಿ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.