
ಮಧುಗಿರಿ (ತುಮಕೂರು): ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿ ಪೂಜೆ ಮಾಡಿಸಲು ರಾಮಾಂಜನೇಯ ದೇವಾಲಯ ಪ್ರವೇಶಿಸಿದ್ದ ಪರಿಶಿಷ್ಟ ಜಾತಿ ಯುವಕನನ್ನು ಹೊರಗಡೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರು ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವಕ ನೀಡಿದ ದೂರಿನ ಮೇರೆಗೆ ಕವಣದಾಲ ಗ್ರಾಮಸ್ಥರಾದ ಗಿರಿಯಣ್ಣಗೌಡ, ಅನಂತ, ಶಿವಾನಂದ, ಯೋಗೀಶ, ಶಿವಮ್ಮ, ನಿಂಗಮ್ಮ, ಮಂಜುನಾಥ, ಮಹಾಂತೇಶ, ವೀರೇಶ, ಯಶೋದಮ್ಮ ವಿರುದ್ಧ ಬಿಎನ್‌ಎಸ್ 191 (2) (ದೊಂಬಿ), 351 (ಬೆದರಿಕೆ), 351 (2) (ಶಾಂತಿ ಭಂಗ, ಉದ್ದೇಶ ಪೂರ್ವಕವಾಗಿ ಅವಮಾನ) ಸೇರಿ ವಿವಿಧ ಕಲಂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
‘ನೀನು ದೇವಸ್ಥಾನದ ಒಳಗಡೆ ಇದ್ದರೆ ಮೈಲಿಗೆಯಾಗುತ್ತದೆ, ಹೊರಗಡೆ ಹೋಗು. ಇಲ್ಲದಿದ್ದರೆ ನಿನ್ನ ಕೊಲೆ ಮಾಡುತ್ತೇವೆ. ನಿನ್ನ ಮುಗಿಸಿ ಬಿಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ನಿನ್ನ ಜಾತಿಯವರು ಎಂದೂ ಸಹ ದೇಗುಲದ ಒಳಗೆ ಬಂದಿಲ್ಲ. ನೀನೊಬ್ಬನೇ ಬಂದಿರುವುದು’ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಆಗಿದ್ದೇನು?:ಯುವಕ ಮೇ 10ರಂದು ಸಂಜೆ ಪೂಜೆ ಮಾಡಿಸಲು ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಒಕ್ಕಲಿಗ ಸಮುದಾಯದವರು ಯುವಕನನ್ನು ಹೊರಗಡೆ ಕಳುಹಿಸಿದ್ದರು. ಇದೇ ವಿಚಾರವಾಗಿ ದೇಗುಲದ ಮುಂಭಾಗದಲ್ಲಿ ಮಾತಿನ ಚಕಮಕಿ ನಡೆದಿತ್ತು.
ಗಲಾಟೆ ಕುರಿತ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಮೇ 11ರಂದು ಪೊಲೀಸರು, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದ್ದರು. ಮುಂದಿನ ದಿನಗಳಲ್ಲಿ ದೇವಾಲಯಕ್ಕೆ ಹೋಗಲು ಯಾರಿಗೂ ನಿರ್ಬಂಧ ವಿಧಿಸದಂತೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.