ADVERTISEMENT

ಪರಿಶಿಷ್ಟರ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹ

ದೇವರ ಉತ್ಸವ ಮೂರ್ತಿ ತೆಗೆದುಕೊಂಡು ಹೋಗಲು ವಿರೋಧ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 15:22 IST
Last Updated 7 ಫೆಬ್ರುವರಿ 2023, 15:22 IST

ತುಮಕೂರು: ತಾಲ್ಲೂಕಿನ ಕಸಬಾ ಹೋಬಳಿ ಅದಲಾಪುರ ಗ್ರಾಮ ದೇವತೆ ಮಾರಮ್ಮದೇವಿ ಉತ್ಸವ ಮೂರ್ತಿಯನ್ನು ಪರಿಶಿಷ್ಟ ಜಾತಿಯವರ ಕೇರಿಗೆ ತೆಗೆದುಕೊಂಡು ಹೋಗಲು ಅವಕಾಶ ನೀಡದೆ, ಹಲ್ಲೆ ನಡೆಸಿದ ಲಿಂಗಾಯತ, ವಾಲ್ಮೀಕಿ ಸಮುದಾಯದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಪರಿಶಿಷ್ಟ ಜಾತಿಯ ಪ್ರಮುಖರು ಒತ್ತಾಯಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಹಾಗೂ ಗ್ರಾಮಾಂತರ ಪೊಲೀಸರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

ಜ. 30ರಂದು ಗ್ರಾಮದ ಜಾತ್ರೆ ಸಮಯದಲ್ಲಿ ಎಲ್ಲಾ ಕೇರಿಗಳಿಗೆ ಉತ್ಸವ ಮೂರ್ತಿ ತೆಗೆದುಕೊಂಡು ಹೋಗುವಂತೆ ನಮ್ಮ ಕೇರಿಗೂ ತೆಗೆದುಕೊಂಡು ಬಂದರೆ ಹರಕೆ ತೀರಿಸಲು ಅನುಕೂಲವಾಗುತ್ತದೆ ಎಂದು ಪರಿಶಿಷ್ಟ ಜಾತಿಯವರು ಕೇಳಿಕೊಂಡಿದ್ದಾರೆ. ಸವರ್ಣೀಯ ಜಾತಿಗೆ ಸೇರಿದ ಮಂಜುನಾಥ್, ಚಿಕ್ಕರಂಗಯ್ಯ, ರಾಕೇಶ್ ಇತರರು ಇದಕ್ಕೆ ಅವಕಾಶ ನೀಡಲಿಲ್ಲ. ದೇವರನ್ನು ನಿಮ್ಮ ಕೇರಿಗೆ ಕಳುಹಿಸಿದರೆ ಅಮಂಗಳವಾಗುತ್ತದೆ ಎಂದು ಹೇಳಿ ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ADVERTISEMENT

ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಲಿಂಗಾಯತರು, ವಾಲ್ಮೀಕಿ ಸಮುದಾಯದವರು ಇದ್ದಾರೆ. ನಮ್ಮ ಕೇರಿಗೂ ಕಳುಹಿಸುವಂತೆ ಗ್ರಾಮದ ಹಿರಿಯರಿಗೆ ಮನವಿ ಮಾಡುತ್ತಿದ್ದರೂ ಇದುವರೆಗೂ ಉತ್ಸವ ಮೂರ್ತಿಯನ್ನು ಪರಿಶಿಷ್ಟ ಜಾತಿಯವರ ಕೇರಿಗೆ ಕಳುಹಿಸುತ್ತಿಲ್ಲ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.