ADVERTISEMENT

ಆಧುನಿಕ ಜೀವನ ಶೈಲಿಯಿಂದ ಖಿನ್ನತೆ: ರಾಘವೇಂದ್ರ ಶೆಟ್ಟಿಗಾರ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 6:35 IST
Last Updated 23 ಅಕ್ಟೋಬರ್ 2021, 6:35 IST
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್ ಗಿಡಕ್ಕೆ ನೀರೆರೆದು ಉದ್ಘಾಟಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ವೀರಭದ್ರಯ್ಯ, ಮನೋವೈದ್ಯರಾದ ಡಿ.ಎಸ್‌.ಸುರೇಂದ್ರನಾಥ್, ಲೋಕೇಶ್ ಬಾಬು, ಡಿಎಚ್‌ಒ ಡಾ.ಎಂ.ಬಿ.ನಾಗೇಂದ್ರಪ್ಪ, ಡಾ.ಸರ್ವೇಶ್ ಕುಮಾರ್, ಡಾ.ಎಂ.ಚೇತನ್, ಡಾ.ಎನ್‌.ಟಿ.ಚಂದ್ರಪ್ಪ, ಡಾ.ಪುರುಷೋತ್ತಮ್, ಡಾ.ಮಹಿಮಾ ಇದ್ದರು
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್ ಗಿಡಕ್ಕೆ ನೀರೆರೆದು ಉದ್ಘಾಟಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ವೀರಭದ್ರಯ್ಯ, ಮನೋವೈದ್ಯರಾದ ಡಿ.ಎಸ್‌.ಸುರೇಂದ್ರನಾಥ್, ಲೋಕೇಶ್ ಬಾಬು, ಡಿಎಚ್‌ಒ ಡಾ.ಎಂ.ಬಿ.ನಾಗೇಂದ್ರಪ್ಪ, ಡಾ.ಸರ್ವೇಶ್ ಕುಮಾರ್, ಡಾ.ಎಂ.ಚೇತನ್, ಡಾ.ಎನ್‌.ಟಿ.ಚಂದ್ರಪ್ಪ, ಡಾ.ಪುರುಷೋತ್ತಮ್, ಡಾ.ಮಹಿಮಾ ಇದ್ದರು   

ತುಮಕೂರು: ಆಧುನಿಕ ಜೀವನ ಶೈಲಿಯಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್ ಅವರು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಕಚೇರಿ ಮಾನಸಿಕ ವಿಭಾಗ, ಸ್ನೇಹ ಮನೋವಿಕಾಸ ಕೇಂದ್ರದ ಆಶ್ರಯದಲ್ಲಿ ‘ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ’ ಎಂಬ ಧ್ಯೇಯದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಜೀವನಕ್ಕಾಗಿ ಆರೋಗ್ಯ ಬಹುಮುಖ್ಯ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನೂ ಉತ್ತಮವಾಗಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಶಿಕ್ಷಣ ನೀಡಬೇಕು ಎಂದು ಸಲಹೆ ಮಾಡಿದರು.

ADVERTISEMENT

ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ಪ್ರತಿ ವ್ಯಕ್ತಿಗೂ ಸಲಹೆ, ಚಿಕಿತ್ಸೆ ಪಡೆಯಲು, ಅಗತ್ಯ ಮಾಹಿತಿ ಪಡೆಯಲು ಹಾಗೂ ಜನರ ಜತೆ ಸಂಘ ಜೀವನ ನಡೆಸಲು ಹಕ್ಕುಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ವೀರಭದ್ರಯ್ಯ, ‘ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕ ಒತ್ತಡದಿಂದ ಬಳಲುತ್ತಿರುತ್ತಾರೆ. ಕೆಲವರಲ್ಲಿ ರೋಗದ ತೀವ್ರತೆ ಹೆಚ್ಚಾಗಿರುತ್ತದೆ. ಅಂತಹವರನ್ನು ಗುರುತಿಸಿ ಸ್ನೇಹಯುತವಾಗಿ ನಡೆದುಕೊಂಡರೆ ರೋಗ ಕಡಿಮೆ ಮಾಡಬಹುದು’ ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು, ಪೋಷಕರ ನಡುವೆ ಮಾನಸಿಕ ಅಂತರ ಹೆಚ್ಚಾಗುತ್ತಿರುವುದರಿಂದ ಮಕ್ಕಳು ಆತ್ಮವಿಶ್ವಾಸ ಕಳೆದುಕೊಳ್ಳುವ ಹಂತ ತಲುಪುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ಸಲುಗೆಯ ಪರಿಣಾಮ ಸಣ್ಣ ಪುಟ್ಟ ವಿಷಯಗಳಿಗೂ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಮಕ್ಕಳಿಗೂ ಸಹ ಮಾನಸಿಕ ಆರೋಗ್ಯದ ಶಿಕ್ಷಣ ನೀಡಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಮನೋವೈದ್ಯ ಡಿ.ಎಸ್‌.ಸುರೇಂದ್ರನಾಥ್, ‘ಹಣವಂತರಿಗೆ ಮಾತ್ರ ಚಿಕಿತ್ಸೆ ಎಂಬ ಪರಿಕಲ್ಪನೆ ಬದಲಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೌಲಭ್ಯ ದೊರೆಯಬೇಕು’ ಎಂದರು.

ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಲೋಕೇಶ್ ಬಾಬು, ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ.ನಾಗೇಂದ್ರಪ್ಪ, ಮಧುಗಿರಿ ತಾಲ್ಲೂಕು ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋವೈದ್ಯ ಸರ್ವೇಶ್ ಕುಮಾರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಎಂ.ಚೇತನ್, ಡಾ.ಎನ್‌.ಟಿ.ಚಂದ್ರಪ್ಪ, ಜಿಲ್ಲಾ ಮಲೇರಿಯಾ ಅಧಿಕಾರಿ ಪುರುಷೋತ್ತಮ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಿಮಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.