ADVERTISEMENT

ತುಮಕೂರು | ದೇಗುಲಗಳಿಗೆ ಬಾರದ ಭಕ್ತರು

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 5:36 IST
Last Updated 8 ಜೂನ್ 2020, 5:36 IST
ತುಮಕೂರಿನ ಆಂಜನೇಯ ದೇಗುಲ
ತುಮಕೂರಿನ ಆಂಜನೇಯ ದೇಗುಲ   
""

ತುಮಕೂರು: ನಗರದ ಬಹುತೇಕ ದೇವಸ್ಥಾನಗಳು ಸೋಮವಾರ ತೆರಿದಿದ್ದರೂ ಭಕ್ತರು ಮಾತ್ರ ದೇವಸ್ಥಾನಗಳತ್ತ ಸುಳಿಯಲಿಲ್ಲ.

ಸರ್ಕಾರದ ಮಾರ್ಗಸೂಚಿ ಅನ್ವಯ ನಗರದ ಪ್ರಮುಖ ದೇವಸ್ಥಾನಗಳು ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು. ದೇವಸ್ಥಾನಗಳಿಗೆ ಬಣ್ಣ ಬಳಿದು, ಹಸಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಆದರೆ ಭಕ್ತರ ಸಂಖ್ಯೆ ಮಾತ್ರ ಕ್ಷೀಣವಾಗಿತ್ತು. ಆಗೊಮ್ಮೆ ಈಗೊಮ್ಮೆ ಭಕ್ತರು ಬಂದು ದೇವರ ದರ್ಶನ ಮುಗಿಸಿ ತಕ್ಷಣ ದೇವಸ್ಥಾನಗಳಿಂದ ತೆರಳುತ್ತಿದ್ದ ದೃಶ್ಯ ಹಲವೆಡೆ ಸಾಮಾನ್ಯವಾಗಿತ್ತು.

ನಗರದ ಪ್ರಮುಖ ದೇವಸ್ಥಾನಗಳಲ್ಲಿ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಿದ ನಂತರವೇ ದೇವಸ್ಥಾನದೊಳಗೆ ತೆರಳಲು ಅವಕಾಶ ಕಲ್ಪಿಸಲಾಗಿತ್ತು.

ADVERTISEMENT

ಇನ್ನೂ ದೇವಸ್ಥಾನಗಳಿಗೆ ಬರುವ ಭಕ್ತರನ್ನೇ ನಂಬಿಕೊಂಡು ಹೂ, ಹಣ್ಣು, ವ್ಯಾಪಾರಕ್ಕೆಂದು ದೇವಸ್ಥಾನಗಳಿಗೆ ಬಂದಿದ್ದ ವ್ಯಾಪಾರಿಗಳು ಕೊಳ್ಳುವ ಭಕ್ತರು ಇಲ್ಲದೇ ನಿರಾಸೆ ಅನುಭವಿಸಿದರು.

ತುಮಕೂರು ಬಿ.ಎಚ್.ರಸ್ತೆಯಲ್ಲಿರುವ ಸೋಮೇಶ್ವರ ದೇವಸ್ಥಾನ, ಗಣಪತಿ ದೇವಸ್ಥಾನಗಳಲ್ಲಿ ಪ್ರತಿ ಸೋಮವಾರ ಬೆಳಿಗ್ಗೆ 9 ಗಂಟೆಯ ಒಳಗರ ಸುಮಾರು 150 ಕ್ಕೂ ಹೆಚ್ಚು ಭಕ್ತರು ಬಂದು ಹೋಗುತ್ತಿದ್ದರು. ಆದರೆ, ಈ ಸೋಮವಾರ ಕೇವಲ 20 ರಿಂದ 30 ಭಕ್ತರಷ್ಟೇ ಭೇಟಿ ನೀಡಿದ್ದರು.

ಭಯ ಹೋಗಿಲ್ಲ: ಜನರಿಗೆ ಇನ್ನೂ ಕೊರೊನಾ ಭಯ ಹೋಗಿಲ್ಲ. ಹಾಗಾಗಿ ದೇವಸ್ಥಾನಗಳತ್ತ ಯಾರು ಸುಳಿಯುತ್ತಿಲ್ಲ. ಹಂತ ಹಂತವಾಗಿ ಭಕ್ತರ ಸಂಖ್ಯೆ ಹೆಚ್ಚಾಗಬಹುದು ಎಂದು ಅರ್ಚಕರು ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಮಾತಾಡಿಕೊಳ್ಳುತ್ತಿದ್ದರು.

ಇನ್ನೂ ರಾಜ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕುಣಿಗಲ್ ತಾಲ್ಲೂಕು ಯಡಿಯೂರು ಕ್ಷೇತ್ರವೂ ಸಹ ಭಕ್ತರಿಲ್ಲದೇ ಭಣಗುಡುತ್ತಿತ್ತು.

ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಗೆ ಸೋಮವಾರ ವಿಶೇಷ ಪೂಜೆ ಮತ್ತು ಅಲಂಕಾರ ಸೇವೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.