ADVERTISEMENT

ತುಮಕೂರು: ಭೂ ಮಾಪನಕ್ಕೆ ಡಿಜಿಟಲ್‌ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:23 IST
Last Updated 21 ಜುಲೈ 2025, 4:23 IST
ತುಮಕೂರು ತಾಲ್ಲೂಕಿನ ಬಳ್ಳಾಪುರದಲ್ಲಿ ಭಾನುವಾರ ರೋವರ್‌ ಉಪಕರಣಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜಮ್‌ ಜಮ್‌, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್‌ ಮೊದಲಾದವರು ಪಾಲ್ಗೊಂಡಿದ್ದರು
ತುಮಕೂರು ತಾಲ್ಲೂಕಿನ ಬಳ್ಳಾಪುರದಲ್ಲಿ ಭಾನುವಾರ ರೋವರ್‌ ಉಪಕರಣಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜಮ್‌ ಜಮ್‌, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್‌ ಮೊದಲಾದವರು ಪಾಲ್ಗೊಂಡಿದ್ದರು   

ತುಮಕೂರು: ಭೂ ಮಾಪನ ಕಾರ್ಯಕ್ಕೆ ಡಿಜಿಟಲ್‌ ಸ್ಪರ್ಶ ನೀಡಿದ್ದು, ಜಿಪಿಎಸ್‌ ತಂತ್ರಜ್ಞಾನ ಒಳಗೊಂಡ ರೋವರ್‌ ಉಪಕರಣಕ್ಕೆ ಚಾಲನೆ ನೀಡಲಾಯಿತು.

ತಾಲ್ಲೂಕಿನ ಬಳ್ಳಾಪುರ ಗ್ರಾಮದಲ್ಲಿ ಭಾನುವಾರ ಕಂದಾಯ ಇಲಾಖೆ, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭೂ ಮಂಜೂರಾತಿ, ಪೋಡಿ, ಹೊಸ ಕಂದಾಯ, ಉಪ ಗ್ರಾಮಗಳ ಸೃಜನೆ ಸಂಬಂಧ ತ್ವರಿತ ಅಳತೆಗೆ ಬಳಸುವ ಅತ್ಯಾಧುನಿಕ ರೋವರ್ ಉಪಕರಣಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಚಾಲನೆ ನೀಡಿದರು.

ನಂತರ ಮಾತನಾಡಿ, ‘ಹಳೆಯ ಸರಪಳಿ ಮಾಪನ ವಿಧಾನದ ಬದಲಾಗಿ ರೋವರ್‌ ಬಳಸುವುದರಿಂದ ನಿಖರವಾದ ಅಳೆಯುವಿಕೆ ಸಾಧ್ಯವಿದೆ. ಇದರಿಂದ ಸಮಯ ಉಳಿತಾಯವಾಗುತ್ತದೆ. ಇದುವರೆಗೆ 1,598 ಸರ್ವೆ ನಂಬರ್‌ಗಳಲ್ಲಿ ನಮೂನೆ 1, 5ನ್ನು ಗಣಕೀಕರಣಗೊಳಿಸಲಾಗಿದೆ. ಡಿಸೆಂಬರ್‌ ಒಳಗೆ 10ಸಾವಿರಕ್ಕೂ ಹೆಚ್ಚು ಭೂ ಮಂಜೂರುದಾರರ ಪೋಡಿ ದುರಸ್ತಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ‘ರೋವರ್‌ ಉಪಕರಣದಿಂದ ವಿಸ್ತಾರವಾದ ಪ್ರದೇಶ ಸಹ ಅಳತೆ ಮಾಡಬಹುದು. ಅರಣ್ಯ ಸೀಮೆ, ಬೆಟ್ಟ ಪ್ರದೇಶ, ಅಸಮ ಪ್ರದೇಶಗಳಲ್ಲಿ ಸರಪಳಿ ಪ್ರಯೋಗಿಸಲು ಕಷ್ಟವಾಗುತ್ತದೆ. ರೋವರ್‌ ಯಾವುದೇ ಭಾಗದಲ್ಲಾದರೂ ಕಾರ್ಯ ನಿರ್ವಹಿಸಲಿದೆ’ ಎಂದರು.

ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರಿಗೆ ಟ್ಯಾಬ್‌ ಸಹಿತ ರೋವರ್‌, ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟ್ಯಾಪ್‌ ವಿತರಿಸಲಾಯಿತು. ಉಪವಿಭಾಗಾಧಿಕಾರಿ ನಾಹಿದಾ ಜಮ್‌ ಜಮ್‌, ತಹಶೀಲ್ದಾರರಾದ ಆರತಿ, ಶಿರಿನ್‌ತಾಜ್‌, ಕೆ.ಪುರಂದರ್, ರಾಜೇಶ್ವರಿ, ತಾ.ಪಂ ಇಒ ಹರ್ಷಕುಮಾರ್‌, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್, ಬುಗುಡನಹಳ್ಳಿ ಗ್ರಾ.ಪಂ ಉಪಾಧ್ಯಕ್ಷೆ ಸುಜಾತಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.