
ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮೆಟ್ಟಿಲು ಬಳಿ ಮಂಗಳವಾರ ವಿದ್ಯಾರ್ಥಿ ಲೋಕೇಶ್ ಮತ್ತು ಪೋಷಕರು ಪ್ರತಿಭಟನೆ ನಡೆಸಿದರು
ತುಮಕೂರು: ‘ಅಂಗವೈಕಲ್ಯ ಹೊಂದಿರುವ ಮಗನಿಗೆ ಪರೀಕ್ಷೆ ಪ್ರವೇಶ ಪತ್ರ ನೀಡುತ್ತಿಲ್ಲ’ ಎಂದು ಆರೋಪಿಸಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮುಖ್ಯದ್ವಾರಕ್ಕೆ ಬೀಗ ಹಾಕಿ ಪೋಷಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ಗುಬ್ಬಿ ಪಟ್ಟಣದ ನರಸಿಂಹಮೂರ್ತಿ ಅವರ ಪುತ್ರ ಜಿ.ಎನ್.ಲೋಕೇಶ್‌ಗೆ ಶೇ 80ರಷ್ಟು ಅಂಗವೈಕಲ್ಯ ಇದೆ. ಪ್ರಸ್ತುತ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (ಇಇಇ) ವಿಭಾಗದಲ್ಲಿ ಪ್ರಥಮ ಸೆಮಿಸ್ಟರ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ‘ಇಂಟರ್‌ನಲ್ ಪರೀಕ್ಷೆಯಲ್ಲಿ ಅಂಕ ಪಡೆದಿಲ್ಲ ಎಂಬ ನೆಪಯೊಡ್ಡಿ ಪ್ರವೇಶ ಪತ್ರ ನೀಡಲು ಕಾಲೇಜು ಆಡಳಿತ ಮಂಡಳಿ ನಿರಾಕರಿಸಿದೆ’ ಎಂದು ಪೋಷಕರು ಆರೋಪಿಸಿದ್ದಾರೆ.
ಸೋಮವಾರ ಬೆಳಿಗ್ಗೆ 9ರಿಂದ ರಾತ್ರಿ 10 ಗಂಟೆಯ ವರೆಗೆ ಪೋಷಕರು ಕಾಲೇಜಿನಲ್ಲಿಯೇ ಉಳಿದಿದ್ದರು. ‘ಪರೀಕ್ಷೆ ಮುಂದೂಡಲಾಗುವುದು, ಪ್ರವೇಶ ಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು’ ಎಂದು ಪ್ರಾಂಶುಪಾಲ ಚಂದ್ರಶೇಖರ್ ಭರವಸೆ ನೀಡಿದ ನಂತರ ಮನೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಬಂದು ನೋಡಿದರೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಪ್ರಾಂಶುಪಾಲರು ರಜೆ ಮೇಲೆ ತೆರಳಿದ್ದರು.
ವಿದ್ಯಾರ್ಥಿ ಲೋಕೇಶ್ ಜತೆಗೆ ಪೋಷಕರು ಇಡೀ ದಿನ ಕಾಲೇಜು ಮೆಟ್ಟಿಲು ಬಳಿ ಕುಳಿತು ಪ್ರತಿಭಟಿಸಿದರು. ‘ನಮಗೆ ಸುಳ್ಳು ಹೇಳಿ ಪರೀಕ್ಷೆ ನಡೆಸುತ್ತಿದ್ದಾರೆ. ಬೇರೆಯವರಿಗೆ ಈ ರೀತಿ ಆಗಬಾರದು ಎಂದು ಪ್ರತಿಭಟನೆ ನಡೆಸುತ್ತಿದ್ದೇವೆ. ಕಾಲೇಜು ಆಡಳಿತ ಮಂಡಳಿಯ ಯಾರೊಬ್ಬರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರವೇಶ ಪತ್ರ ನೀಡುವ ತನಕ ಇಲ್ಲಿಂದ ಕದಲುವುದಿಲ್ಲ’ ಎಂದು ಪಟ್ಟು ಹಿಡಿದರು. ಕೊನೆಗೂ ಮನವೊಲಿಸಿದ ಪೊಲೀಸರು ಸಂಜೆ ವೇಳೆಗೆ ಮನೆಗೆ ಕಳುಹಿಸಿದರು.
ಮಾಹಿತಿ ಪಡೆಯಲು ಪ್ರಾಂಶುಪಾಲರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.