ADVERTISEMENT

ಪೆಟ್ರೋಲ್ 100 ನಾಟೌಟ್:‌ ತೈಲದ ಮೇಲಿನ ತೆರಿಗೆ ಇಳಿಸುವಂತೆ ಕಾಂಗ್ರೆಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 6:02 IST
Last Updated 13 ಜೂನ್ 2021, 6:02 IST
   

ತುಮಕೂರು: ಪೆಟ್ರೋಲ್, ಡೀಸೆಲ್ ಮೇಲೆ ಕೇಂದ್ರ ಸರ್ಕಾರ ಲೀಟರ್‌ಗೆ ₹ 64 ತೆರಿಗೆ ವಿಧಿಸುತ್ತಿದ್ದು, ತಕ್ಷಣ ಕಡಿಮೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

ನಗರದ ಹೊರ ವಲಯದ ಹೆಗ್ಗೆರೆ ಸಮೀಪದ ಪೆಟ್ರೋಲ್ ಬಂಕ್ ಮುಂದೆ ಭಾನುವಾರ ‘ಪೆಟ್ರೋಲ್ 100 ನಾಟೌಟ್’ ಹೋರಾಟದ ಭಾಗವಾಗಿ ಪ್ರತಿಭಟನೆ ನಡೆಸಿ ನಂತರ ಮಾತನಾಡಿದರು.

ತೈಲ ಬೆಲೆ ಏರಿಕೆಯಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ರೈತರು ರಸಗೊಬ್ಬರ ಬಳಸದಂತಾಗಿದೆ. ಬಡವರು ಮನೆ ನಿರ್ಮಾಣ ಮಾಡಲು ಬಳಸುವ ಸಿಮೆಂಟ್, ಕಬ್ಬಿಣದ ಬೆಲೆ ಗಗನ ಮುಟ್ಟಿದೆ. ಸರ್ಕಾರಿ, ಖಾಸಗಿ ಕ್ಷೇತ್ರದ ಉದ್ಯೋಗಿಗಳ ಸಂಬಳ ಮಾತ್ರ ಹೆಚ್ಚಳವಾಗಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಮೊತ್ತ ಏರಿಕೆ ಮಾಡಿಲ್ಲ. ಆದರೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಬದುಕುವುದು ಕಷ್ಟಕರವಾಗಿದೆ. ಆದರೂ ತೈಲ ಬೆಲೆ ಇಳಿಸುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ಜನರು ಉದ್ಯೋಗ ಕೇಳಿದರೆ ಪಕೋಡ ಮಾರಾಟಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಾರೆ. ಪಕೋಡ ತಯಾರಿಸುವ ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ ₹ 200ಕ್ಕೆ ಹೆಚ್ಚಳವಾಗಿದೆ. ಯುವಕರು ಪಕೋಡ ತಯಾರಿಸಲೂ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ತೈಲ ಬೆಲೆ ಇಳಿಕೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ ಹೋಬಳಿ ಮಟ್ಟದಲ್ಲಿ ನಡೆಸಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಹೋರಾಟವಲ್ಲ. ಕೇಂದ್ರ ಸರ್ಕಾರ ಜನರಿಂದ ‘ಪಿಕ್‌ ಪಾಕೇಟ್’ ಮಾಡುತ್ತಿದ್ದು, ಅವರ ಧ್ವನಿಯಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸೋಮವಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಶಾಸಕ ಜಿ.ಪರಮೇಶ್ವರ, ಮುಖಂಡರಾದ ಪ್ರಸನ್ನ ಕುಮಾರ್, ರಫಿಕ್ ಅಹಮದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.