ತಿಪಟೂರು: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ಸೊಗಡು ಜನಪದ ಹೆಜ್ಜೆ ಸಂಘಟನೆಯಿಂದ ಪರಿಸರ ಸ್ನೇಹಿ ಗೌರಿ– ಗಣಪತಿ ವಿಗ್ರಹ ತಯಾರಿಕಾ ಶಿಬಿರ ನಡೆಯಿತು.
ಶಿಬಿರದಲ್ಲಿ ಮಕ್ಕಳು ಮೊಬೈಲ್ ಬಿಟ್ಟು ಮಣ್ಣಿನ ಜೊತೆ ಬೆರೆತರು. ಶಿಬಿರವನ್ನು ನಾಲ್ಕು ಹಂತಗಳಲ್ಲಿ ನಿರ್ವಹಿಸಿ ಮೊದಲ ಹಂತದಲ್ಲಿ ಪರಿಸರ ಮಾಲಿನ್ಯ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಗೌರಿ ಗಣಪತಿಗಳಿಂದ ಉಂಟಾಗುವ ಹಾನಿ ಕುರಿತು ತಜ್ಞರು ಮಾಹಿತಿ ನೀಡಿದರು. ಎರಡನೇ ಹಂತದಲ್ಲಿ ಮಕ್ಕಳಿಗೆ ಮಣ್ಣಿನ ಮಹತ್ವ ಹಾಗೂ ಪರಿಸರ ಸ್ನೇಹಿ ವಿಗ್ರಹದ ಅರ್ಥ ತಿಳಿಸಲಾಯಿತು. ಮೂರನೇ ಹಂತದಲ್ಲಿ ಕೈಯಿಂದ ವಿಗ್ರಹ ತಯಾರಿಕೆಗೆ ಮಾರ್ಗದರ್ಶನ ನೀಡಲಾಯಿತು. ಕೊನೇಯ ಹಂತದಲ್ಲಿ ಮಕ್ಕಳಿಂದ ತಯಾರಿಸಿದ ಗೌರಿ, ಗಣಪತಿ ಪ್ರದರ್ಶನ ಮಾಡಲಾಯಿತು.
ಪರಿಸರ ಹಿತದಾಯಕ ಸಂದೇಶವನ್ನು ಸಮಾಜಕ್ಕೆ ತಲುಪಿಸಲು ಈ ಶಿಬಿರ ಮಹತ್ವದ ಹೆಜ್ಜೆಯಾಗಿದ್ದು, ‘ಪರಿಸರ ಉಳಿಸಿ, ಭವಿಷ್ಯ ಉಳಿಸಿ’ ಎಂಬ ಧ್ವನಿಯನ್ನು ಗಟ್ಟಿಯಾಗಿ ಮೊಳಗಿಸಿದರು. ಮಕ್ಕಳು ಹಾಗೂ ಪೋಷಕರು ಸಮಾನವಾಗಿ ಸಂತೋಷಪಟ್ಟರು.
ಕಾರ್ಯಕ್ರಮಕ್ಕೆ ಕಲ್ಪತರು ವಿದ್ಯಾಸಂಸ್ಥೆ ಕಾರ್ಯದರ್ಶಿ ಸಂಗಮೇಶ್ ಎಂ.ಆರ್. ಗಣಪತಿ ಪೂಜೆ ಮಾಡಿ ಮಕ್ಕಳಿಗೆ ಕಲಿಕಾ ಮಣ್ಣು ನೀಡುವ ಮೂಲಕ ಚಾಲನೆ ನೀಡಿದರು.
ಶಿಬಿರದಲ್ಲಿ ಭಾಗಿಯಾಗಿದ್ದ 150ಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರಿಗೆ ಸಾರ್ವಜನಿಕರಿಗೆ ಗಣಪತಿ ವಿಗ್ರಹ ತಯಾರಿಕೆಯ ಬಗ್ಗೆ ಹೊಸಳ್ಳಿ ನಾಗರಾಜ ಅವರು ಮಾಹಿತಿ ನೀಡಿದರು.
ಪೋಷಕರ ವರ್ಗ, ಹಿರಿಯ ಮತ್ತು ಕಿರಿಯರ ವಿಭಾಗ, ಪ್ರೌಢ ವ್ಯವಸ್ಥೆಯ ಮಕ್ಕಳು ಎಂಬ ನಾಲ್ಕು ಹಂತಗಳಲ್ಲಿ ವಿಭಾಗ ಮಾಡಿ, ಉತ್ತಮ ಗಣಪತಿ ವಿಗ್ರಹ ತಯಾರಿಸಿದವರಿಗೆ ಬಹುಮಾನ ನೀಡಲಾಯಿತು.
ಒಂದರಿಂದ ನಾಲ್ಕನೇ ತರಗತಿ ಹಂತದಲ್ಲಿ ಸುಮುಖ, ರಾಘವಿ, ಗಾನನ, ಐದರಿಂದ ಏಳನೇ ತರಗತಿ ಹಂತದಲ್ಲಿ ಯಶವಂತ, ಗಣೇಶ್, ಧನ್ಯಶ್ರೀ, ಫ್ರೌಢ ಹಂತದಲ್ಲಿ ಸುಪ್ರೀತ್, ಪ್ರೀತಮ್, ಶಮಂತರಾಜ್, ಹಿರಿಯರ ವಿಬಾಗದಲ್ಲಿ ಪ್ರತಿಮಾ, ಸರಸ್ವತಿ, ಕವಿತ ಕೈಲಾಸ ವಿಜೇತರಾದರು.
ಸಂಘದ ಗೌರವಾಧ್ಯಕ್ಷ ಮುರಳೀಧರ್ ಮಲ್ಲೇನಹಳ್ಳಿ, ಅಧ್ಯಕ್ಷ ಸಿರಿಗಂಧ ಗುರು, ಕಾರ್ಯದರ್ಶಿ ಚಿದಾನಂದ್, ನಿರ್ದೇಶಕರಾದ ನಿಜಗುಣ, ತರಕಾರಿ ಗಂಗಾಧರ್, ಶಾಂತನಹಳ್ಳಿ ಸುರೇಶ್, ಬೆಸ್ಕಾಂನ ಎಇಇ ಮನೋಹರ್, ಅಬಕಾರಿ ಇಲಾಖೆಯ ಉಮೇಶ್, ಪ್ರಭಾ ವಿಶ್ವನಾಥ್, ಮಂಜುಳಾ ತಿಮ್ಮೇಗೌಡ ಹಾಜರಿದ್ದರು.
ಸ್ಥಳೀಯ ಸಂಸ್ಕೃತಿ ಕಲೆ ಸಾಹಿತ್ಯ ಹಾಗೂ ಪರಿಸರ ಕಾಳಜಿಯ ಮಿಶ್ರಣವೇ ಸೊಗಡು ಜನಪದ ಹೆಜ್ಜೆಯ ಈ ಕಾರ್ಯಕ್ರಮ. ಜನಪದ ಗೀತೆಗಳಿಂದ ಹಿಡಿದು ಪರಿಸರ ಜಾಗೃತಿ ಅಭಿಯಾನಗಳವರೆಗೆ ಹೊಣೆಗಾರಿಕೆಯನ್ನು ಹೊತ್ತು ಸಾಗುತ್ತಿದೆ.ಸಿರಿಗಂಧ ಗುರು, ಸೊಗಡು ಜನಪದ ಹೆಜ್ಜೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.