ADVERTISEMENT

ದಕ್ಕಲಿಗರಿಗೆ ದಕ್ಕದ ಸೌಲಭ್ಯ: ಶಾಂತರಾಜು

ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿಯೇ ಅಲೆಮಾರಿ ಮಕ್ಕಳು ಬೀದಿಪಾಲು; ಜಿಲ್ಲೆಯಲ್ಲಿ 32 ಕುಟುಂಬಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 8 ಫೆಬ್ರುವರಿ 2021, 3:34 IST
Last Updated 8 ಫೆಬ್ರುವರಿ 2021, 3:34 IST
ಊಟಕ್ಕೆ ಸಾಲು
ಊಟಕ್ಕೆ ಸಾಲು   

ತುಮಕೂರು: ನಮ್ಮ ಮಕ್ಕಳಿಗೆ ನೋಟ್‌ಪುಸ್ತಕ, ಪೆನ್ನು, ಬಟ್ಟೆ, ಒಂದಿಷ್ಟು ಆಹಾರ ಕೊಟ್ಟರೆ ಅನುಕೂಲ– ಹೀಗೆ ಹೇಳುತ್ತಲೇ ತಮ್ಮ ಬದುಕಿನ ಕಥೆಗಳನ್ನು ಬಿಚ್ಚಿಡುವರು ಚಿಕ್ಕನಾಯಕನಹಳ್ಳಿಯ ಗಾಂಧಿನಗರದ ದಕ್ಕಲಿಗ ಸಮುದಾಯದ ಶಾಂತರಾಜು.

ತುಮಕೂರು ಜಿಲ್ಲೆ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಲೆಮಾರಿ ಸಮುದಾಯಗಳ ಅಧ್ಯಯನಕ್ಕೆ ಉತ್ತಮ ಆಕರವಾಗಿರುವ ನೆಲೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿಯೇ 18ಕ್ಕೂ ಹೆಚ್ಚು ಅಲೆಮಾರಿ ಸಮುದಾಯಗಳು ಇವೆ. ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಹುಟ್ಟಿದ್ದು ಇಲ್ಲಿನ ದಕ್ಕಲಕೇರಿಯಲ್ಲಿಯೇ.

ಅಲೆಮಾರಿ ಸಮುದಾಯ ದಕ್ಕಲಿಗರ 32 ಕುಟುಂಬಗಳು ಜಿಲ್ಲೆಯಲ್ಲಿವೆ. ಅದರಲ್ಲಿ 28 ಕುಟುಂಬಗಳು ಚಿಕ್ಕನಾಯನಹಳ್ಳಿಯ 23ನೇ ವಾರ್ಡ್ ವ್ಯಾಪ್ತಿಯ ಸೇರುವ ರಾಯಪ್ಪನಪಾಳ್ಯ ರಸ್ತೆಯ ಗಾಂಧಿನಗರದಲ್ಲಿ ವಾಸಿಸುತ್ತಿವೆ. ಉಳಿದ ನಾಲ್ಕು ಕುಟುಂಬಗಳು ತುರುವೇಕೆರೆಯಲ್ಲಿ ಇವೆ. ರಾಜ್ಯದಲ್ಲಿ ಈ ಸಮುದಾಯದ 200 ಕುಟುಂಬಗಳಷ್ಟೇ ಇವೆ ಎನ್ನಲಾಗುತ್ತಿದೆ. ಅಭಿವೃದ್ಧಿಯ ಮುಖ್ಯವಾಹಿನಿಯಿಂದ ಇಂದಿಗೂ ದಕ್ಕಲಿಗರು ದೂರವೇ ಊಳಿದಿದ್ದಾರೆ.

ADVERTISEMENT

ಹೀಗೆ ಜಿಲ್ಲೆಯಲ್ಲಿ ಒಂದೊಂದು ಅಲೆಮಾರಿ ಸಮುದಾಯಗಳದ್ದೂ ಒಂದೊಂದು ಕಥೆ ಎನ್ನುವಂತಿದೆ. ಚಿಕ್ಕನಾಯಕನಹಳ್ಳಿ ಹೊರವಲಯದ ಗಾಂಧಿನಗರ ಸ್ಮಶಾನಕ್ಕೆ ಹೊಂದಿಕೊಂಡೇ ಇದೆ. ಈ ಸ್ಮಶಾನದಲ್ಲಿ ಮುರಿದು ಬಿದ್ದ ಚಟ್ಟಗಳಂತೆಯೇ ಈ ದಕ್ಕಲಿಗರ ಬದುಕು ಮತ್ತು ಅವರ ಕುಟುಂಬದ ಕುಡಿಗಳ ಬದುಕು ಸಹ ಮುರಿದು ಬೀಳುತ್ತಿದೆ.

‘ಕಾಲೊನಿಯ 28 ಕುಟುಂಬಗಳಲ್ಲಿ 40 ಮಕ್ಕಳು ಇದ್ದಾರೆ. ಲಾಕ್‌ಡೌನ್ ಪರಿಣಾಮ ಶಾಲೆ ಬಂದ್ ಆಯಿತು. ಕೆಲವರು ಏರ್‌ಪಿನ್, ಸೂಜಿ ಮಾರಾಟಕ್ಕೆ ಪೋಷಕರ ಜತೆ ತೆರಳಿದರು. ಕೆಲವು ಮಕ್ಕಳ ಪೋಷಕರು ಕೂಲಿಗೆ ತೆರಳುವರು. ಕೆಲವು ಮಕ್ಕಳು ಅಜ್ಜಿಯರ ಆಶ್ರಯದಲ್ಲಿ ಇದ್ದಾರೆ. ಮಧ್ಯಾಹ್ನದ ಊಟದ ಬದಲಿಗೆ ಸರ್ಕಾರ ನೀಡುವ ಪಡಿತರ ಸೂಕ್ತವಾಗಿ ತಲುಪಿಲ್ಲ’ ಎಂದು ಶಾಂತರಾಜು ಬೇಸರ ವ್ಯಕ್ತಪಡಿಸುವರು.

ದಕ್ಕಲಿಗ ಸಮುದಾಯದ ಶಾಂತರಾಜು ಮತ್ತು ಅವರ ಪುತ್ರಿ ಈ ಮಕ್ಕಳಿಗೆ ಮನೆ ಪಾಠ ಮಾಡುತ್ತಿದ್ದಾರೆ. ಅಕ್ಷರ ಕಲಿತ ಬೆರಳೆಣಿಕೆಯ ದಕ್ಕಲಿಗರಲ್ಲಿ ಈ ಕುಟುಂಬ ಪ್ರಮುಖವಾಗಿದೆ.

‘ಸಿ.ಎಸ್.ದ್ವಾರಕನಾಥ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ವೇಳೆ ನಮಗೆ ಜಿಲ್ಲಾಡಳಿತದಿಂದ ಸ್ಮಶಾನದ ಬಳಿ ನಿವೇಶನ ಕೊಡಿಸಿದರು. ಕೆಲವರು ಗುಡಿಸಲುಗಳಲ್ಲಿ ಬದುಕುತ್ತಿದ್ದಾರೆ. ಕೆಲವರು ಶೀಟಿನ ಮನೆಗಳಲ್ಲಿ ಇದ್ದಾರೆ. ವಿದ್ಯುತ್ ಕಂಬಗಳಿವೆ. ಬೀದಿ ದೀಪಗಳಿಲ್ಲ’ ಎಂದು ಸಮಸ್ಯೆಗಳ ಪಟ್ಟಿಯನ್ನು ಮುಂದಿಡುವರು.

ತಿಪಟೂರಿನ ಕೆಲವರು, ಪರಿಚಿತರು ಲಾಕ್‌ಡೌನ್ ಸಮಯದಲ್ಲಿ ಆಹಾರ, ಬಟ್ಟೆ ನೀಡಿದರು. ಆದರೆ ಈಗ ಶಾಲೆ ಆರಂಭವಾಗಿಲ್ಲ. ಮಕ್ಕಳ ಶಿಕ್ಷಣವೇ ದೊಡ್ಡ ಸವಾಲಾಗಿದೆ. ಕೆಲ ಮಕ್ಕಳು ಚಿಂದಿ ಆಯಲು ಹೋಗುತ್ತಿದ್ದಾರೆ. ಸೌಲಭ್ಯಗಳು ದೊರೆಯದಿದ್ದರೆ ಅಕ್ಷರ ಕಲಿಯುತ್ತಿರುವ ಮಕ್ಕಳು ಬೀದಿಪಾಲಾಗುವರು ಎನ್ನುವರು.

ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಹೇಳಿದ್ದೇವೆ. ಪರಿಹಾರವಾಗಿಲ್ಲ. ಪಕ್ಕದಲ್ಲಿಯೇ ಸ್ಮಶಾನ ಇದೆ. ನಾಯಿ ಬೊಗಳುವುದನ್ನು ಕೇಳಿ ರಾತ್ರಿ ಮಕ್ಕಳು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.