ಹುಳಿಯಾರು ಪಟ್ಟಣದ ಕಸವನ್ನು ಕೆಂಕೆರೆ ಸಮೀಪದ ಕುದುರೆಕಣಿವೆ ಅರಣ್ಯ ಪ್ರದೇಶದಲ್ಲಿ ವಿಲೇವಾರಿ ಮಾಡಿರುವುದು
ಹುಳಿಯಾರು: ಪಟ್ಟಣದ ಘನತ್ಯಾಜ್ಯವನ್ನು ಕೆಂಕೆರೆ ಸಮೀಪದ ಕುದುರೆ ಕಣಿವೆ ಅರಣ್ಯ ಪ್ರದೇಶದಲ್ಲಿ ಸುರಿದ ಸಂಬಂಧ ಪಟ್ಟಣ ಪಂಚಾಯಿತಿ ಟ್ರ್ಯಾಕ್ಟರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದ ದೂರು ದಾಖಲಿಸಿಕೊಂಡಿದ್ದಾರೆ.
ಪಟ್ಟಣದ ಕಸದ ವಿಲೇವಾರಿ ಕಗ್ಗಂಟಾಗಿದ್ದು ಬಹು ವರ್ಷಗಳಿಂದ ಕಸ ಎಲ್ಲೆಂದರಲ್ಲಿ ಸುರಿಯುತ್ತಲೇ ಬಂದಿದ್ದಾರೆ. ಗ್ರಾಮ ಪಂಚಾಯಿತಿ ಆದಾಗಿನಿಂದಲೂ ಸಮಸ್ಯೆ ಕಾಡುತ್ತಿದ್ದು ಕೆಲವೊಮ್ಮೆ ಪಟ್ಟಣದಲ್ಲಿ ಕಸ ವಿಲೇವಾರಿ ಮಾಡದೆ ಚರಂಡಿಗಳಲ್ಲಿಯೇ ಕೊಳೆಯುತ್ತಿದೆ.
ಗೌರಿ ಗಣೇಶ ಹಬ್ಬದ ನಿಮಿತ್ತ ಹಳೆ ಕಸವನ್ನು ವಿಲೇವಾರಿ ಮಾಡಲು ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಂಗಳವಾರ ಮುಂಜಾನೆ ಕೆಂಕೆರೆ ಗ್ರಾಮದ ಮೂಲಕ ಹಾದು ಅರಣ್ಯ ಪ್ರದೇಶದಲ್ಲಿ ಸುರಿದಿದ್ದಾರೆ. ಗ್ರಾಮಸ್ಥರು ಟ್ರ್ಯಾಕ್ಟರನ್ನು ಹಿಂಬಾಲಿಸಿ ಸುರಿದು ಬರುವ ವೇಳೆ ತಡೆದು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಟ್ರ್ಯಾಕ್ಟರನ್ನು ವಶಕ್ಕೆ ಪಡೆದು ಬುಕ್ಕಾಪಟ್ಟಣ ವಲಯ ಅರಣ್ಯ ಕಚೇರಿಗೆ ಕೊಂಡೊಯ್ದಿದ್ದಾರೆ.
ಬಗೆ ಹರಿಯದ ಸಮಸ್ಯೆ: ಪಟ್ಟಣದ ಕಸ ವಿಲೇವಾರಿಗೆ ಈಗಾಗಲೇ ನಾಲ್ಕೈದು ಕಡೆ ಗುರುತಿಸಿ ವಿರೋಧ ವ್ಯಕ್ತವಾದ ಕಾರಣ ಯೋಜನೆ ಕೈ ಬಿಟ್ಟಿದ್ದಾರೆ. ಪಟ್ಟಣದಲ್ಲಿ ಕಸ ಹೆಚ್ಚಳ ಆಗುತ್ತಿದ್ದಂತೆ ಪಕ್ಕದ ಗ್ರಾಮಗಳ ಕಣ್ಣುತಪ್ಪಿಸಿ ಅರಣ್ಯ ಪ್ರದೇಶಗಳಿಗೆ ಸುರಿಯುವುದನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಾಡುತ್ತಾ ಬಂದಿದ್ದಾರೆ.
ಕಸವನ್ನು ಬೆಳಗ್ಗೆ ಕುದುರೆಕಣಿವೆ ಅರಣ್ಯ ಪ್ರದೇಶದ ಗಂಗಮ್ಮನ ಕೆರೆಗೆ ನೀರು ಹರಿದು ಬರುವ ಸ್ಥಳದಲ್ಲಿ ಸುರಿದಿದ್ದಾರೆ. ಮಳೆ ಬಂದರೆ ನೀರಿನ ಜತೆ ಹರಿದು ಕೆರೆ ನೀರು ಮಲಿನವಾಗುತ್ತದೆ ಎಂದು ಕೆಂಕೆರೆ ಗ್ರಾಮದ ಹೊನ್ನಪ್ಪ ಹೇಳಿದರು.
ಅರಣ್ಯ ಇಲಾಖೆ ಅಧಿಕಾರಿಗಳ ಕಣ್ಣುತಪ್ಪಿಸಿ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಕಸ ಸುರಿಯುತ್ತಾರೆ. ಪ್ಲಾಸ್ಟಿಕ್ ಜತೆ ಕಸ ಕೊಳೆತು ಪ್ರಾಣಿ ಪಕ್ಷಿಗಳು ತಿನ್ನುವುದರಿಂದ ಸಾವನ್ನಪ್ಪುತ್ತವೆ. ಈಗಾಗಲೇ ಹಲವಾರು ಬಾರಿ ತಿಳಿವಳಿಕೆ ನೀಡಿದ್ದರೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮುಂದುವರೆಸುತ್ತಲೇ ಇದ್ದಾರೆ ಎಂದು ಬುಕ್ಕಾಪಟ್ಟಣ ವಲಯ ಸಹಾಯಕ ಅರಣ್ಯಾಧಿಕಾರಿ ಕಿರಣ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.