
ತುಮಕೂರು: ಖಾಸಗಿ ಕಂಪನಿಯ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ನಗದ ಕೆ.ಆರ್.ಬಡಾವಣೆ ಉದ್ಯಮಿ ಚಂದನ್ ಕುಮಾರ್ ಎಂಬುವರಿಗೆ ₹8.75 ಲಕ್ಷ ವಂಚಿಸಲಾಗಿದೆ.
‘Snitch’ ಕಂಪನಿಯ ಬಟ್ಟೆ ಅಂಗಡಿ ತೆರೆಯಲು ಮುಂದಾಗಿದ್ದ ಚಂದನ್ ಆನ್‌ಲೈನ್‌ನಲ್ಲಿ ಕಂಪನಿಯ ಫ್ರಾಂಚೈಸಿ ಪಡೆಯುವ ಬಗ್ಗೆ ಹುಡುಕಿದ್ದಾರೆ. ಅಪರಿಚಿತರು ಕರೆ ಮಾಡಿ ‘Snitch’ ಕಂಪನಿಯಿಂದ ಮಾತನಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದಾರೆ. ಅರ್ಜಿ ಸಲ್ಲಿಸಿ, ಅಂಗಡಿ ಆರಂಭಿಸಲು ಉದ್ದೇಶಿಸಿದ ಜಾಗದ ವಿಡಿಯೊ, ಫೋಟೊ, ಬ್ಯಾಂಕ್ ಖಾತೆಯ ವಿವರ ಸೇರಿ ಅಗತ್ಯ ದಾಖಲೆ ಸಲ್ಲಿಸುವಂತೆ ತಿಳಿಸಿದ್ದಾರೆ.
ಕಂಪನಿಯ ಫ್ರಾಂಚೈಸಿ ತೆರೆಯಲು ಅನುಮತಿ ನೀಡಲಾಗುವುದು. ಮೊದಲಿಗೆ ₹2.75 ಲಕ್ಷ ಪಾವತಿಸುವಂತೆ ತಿಳಿಸಿದ್ದಾರೆ. ಚಂದನ್ ಅದರಂತೆ ಹಣ ವರ್ಗಾಯಿಸಿದ್ದಾರೆ. ₹12 ಲಕ್ಷ ಭದ್ರತಾ ಠೇವಣಿ ನೀಡಬೇಕು. ಎರಡು ಹಂತದಲ್ಲಿ ಹಣ ಪಾವತಿಸಬೇಕು ಎಂದು ಕೇಳಿದ್ದಾರೆ. ಚಂದನ್ ಒಂದು ಕಂತಿನ ಭಾಗವಾಗಿ ₹6 ಲಕ್ಷ ವರ್ಗಾವಣೆ ಮಾಡಿದ್ದಾರೆ. ನಂತರ ಕಂಪನಿಯವರ ಜತೆ ನೇರವಾಗಿ ಮಾತನಾಡಿದಾಗ ಇದು ವಂಚನೆಯ ಕರೆ ಎಂಬುವುದು ಗೊತ್ತಾಗಿದೆ.
ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ಹಣ ವಂಚಿಸಿದವರನ್ನು ಪತ್ತೆ ಹಚ್ಚಬೇಕು. ಕಾನೂನು ಕ್ರಮಕೈಗೊಂಡು ಹಣ ವಾಪಸ್ ಕೊಡಿಸಬೇಕು ಎಂದು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.