ತುಮಕೂರು: ಕ್ರಿಪ್ಟೊ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಉತ್ತಮ ಆದಾಯ ಪಡೆಯಬಹುದು ಎಂದು ನಂಬಿಸಿ ಕೊರಟಗೆರೆ ತಾಲ್ಲೂಕಿನ ತೀತಾ ಗ್ರಾಮದ ಶಿಕ್ಷಕ ಟಿ.ಆರ್.ರಂಗನಾಥ್ ಎಂಬುವರಿಗೆ ₹4.90 ಲಕ್ಷ ವಂಚಿಸಲಾಗಿದೆ.
ಶ್ರೀಕಾಂತ್ ನಾಯಕ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ಆರೋಪಿ ‘Omminiverse Digital marketing’ ಏಜೆಂಟ್ ಎಂದು ತಿಳಿಸಿದ್ದರು. ‘Omminiverse Digital market’ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದಿದ್ದಾರೆ. ಆಗಾಗ ಕರೆ ಮಾಡಿ ಹಣ ಹೂಡಿಕೆ ಬಗ್ಗೆ ಹೇಳುತ್ತಿದ್ದರು. ಅವರ ಮಾತು ನಂಬಿ ಶ್ರೀಕಾಂತ್ ಭೇಟಿಗೆ ರಂಗನಾಥ್ ಒಪ್ಪಿಕೊಂಡಿದ್ದರು.
ಶ್ರೀಕಾಂತ್ ಮತ್ತು ಪ್ರದೀಪ್ ಎಂಬುವರು ರಂಗನಾಥ್ ಅವರ ಮನೆಗೆ ಭೇಟಿ ನೀಡಿದ್ದರು. ಕ್ರಿಪ್ಟೊ ಕರೆನ್ಸಿ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಗಣ್ಯ ವ್ಯಕ್ತಿಗಳು ಕ್ರಿಪ್ಟೊ ಕರೆನ್ಸಿ ಬಗ್ಗೆ ಮಾತನಾಡಿರುವುದು ಲ್ಯಾಪ್‌ಟಾಪ್‌ನಲ್ಲಿ ತೋರಿಸಿದ್ದರು. ಇದಾದ ಬಳಿಕ ರಂಗನಾಥ್ ಹಣ ಹೂಡಿಕೆಗೆ ಮುಂದಾಗಿದ್ದರು.
ಹಂತ ಹಂತವಾಗಿ ಒಟ್ಟು ₹4.90 ಲಕ್ಷ ಹೂಡಿಕೆ ಮಾಡಿದ್ದಾರೆ. ಯಾವುದೇ ಹಣ ವಾಪಸ್ ಬಂದಿಲ್ಲ. ಈ ಬಗ್ಗೆ ವಿಚಾರಿಸಿದಾಗ ಇನ್ನೂ ಹೆಚ್ಚಿನ ಹಣ ವರ್ಗಾವಣೆ ಮಾಡುವಂತೆ ಹೇಳಿದ್ದಾರೆ. ರಂಗನಾಥ್ ‘ನನ್ನ ಬಳಿ ಹಣವಿಲ್ಲ’ ಎಂದಾಗ ಬೇರೆ ವ್ಯಕ್ತಿಗಳಿಂದ ಹೂಡಿಕೆ ಮಾಡಿಸುವಂತೆ ತಿಳಿಸಿದ್ದಾರೆ. ನಂತರ ಇಂಟರ್‌ನೆಟ್‌ನಲ್ಲಿ ಪರಿಶೀಲಿಸಿದಾಗ ‘Omminiverse Digital market’ ಏಜೆಂಟ್ ಇಲ್ಲದಿರುವುದು ಗೊತ್ತಾಗಿದೆ.
ಮೋಸ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.