ಕುಣಿಗಲ್: ಪಟ್ಟಣದ ಜಿಕೆಬಿಎಂಎಸ್ ಬಯಲುರಂಗ ಮಂದಿರದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಷ್ಠಾಪಸಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಆಗಸ್ಟ್ 27ರಂದು ಪಟ್ಟಣವನ್ನು ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಪ್ರತಿಷ್ಠಾಪಿಸಲಾಗಿದ್ದ ನರಸಿಂಹಾವತಾರದ ಗಣೇಶ ಮೂರ್ತಿಗೆ ನಿತ್ಯ ಪೂಜೆ, ಸಂಜೆ ವಿವಿಧ ಕಾರ್ಯಕ್ರಮಗಳಿಂದ ಭಕ್ತರ ಮನಸಿಗೆ ಮುದ ನೀಡಿದ ಕಾರ್ಯಕ್ರಮಗಳು ಜತೆಗೆ ಸ್ಥಳೀಯ ಕಲಾವಿದರಿಗೆ, ಸಂಘಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲಾಗಿತ್ತು.
ಶೋಭಾಯಾತ್ರೆಗೆ ದೇಶಭಕ್ತರ ಸ್ತಬ್ಧ ಚಿತ್ರ, ಬೃಹತ್ ಭಜರಂಗಿ, ಜನಪದ ಕಲಾತಂಡಗಳು ಮೆರಗು ತಂದರೆ ತಮಟೆ, ನಾಸಿಕ್ ಡೋಲ್, ಚಂಡೆ ಮದ್ದಳೆಗೆ ಯುವಕ, ಯುವತಿಯರ ಕುಣಿದು ಕುಪ್ಪಳಿಸಿದರು.
ಗ್ರಾಮ ದೇವತೆ ವೃತ್ತ, ಕೋಟೆ ಪ್ರದೇಶ ಮತ್ತು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಶೋಭಾಯಾತ್ರೆ ಬಂದಾಗ ಮುಸ್ಲಿಮರು ಗಣೇಶನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ನೀರು, ತಂಪು ಪಾನೀಯ ಮತ್ತು ಹಣ್ಣುಗಳನ್ನು ವಿತರಿಸಿದರು.
ಶಾಸಕ ಡಾ.ರಂಗನಾಥ್, ಮಾಜಿ ಸಚಿವ ಡಿ.ನಾಗರಾಜಯ್ಯ, ಬಿಜೆಪಿ ಮುಖಂಡ ರಾಜೇಶ್ ಗೌಡ, ಜೆಡಿಎಸ್ ಮುಖಂಡ ಬಿ.ಎನ್. ಜಗದೀಶ್, ಬಜರಂಗದಳದ ಗಣೇಶೋತ್ಸವದ ಸಂಚಾಲಕ ಸತೀಶ್, ಜಗದೀಶ್, ಪುರುಷೋತ್ತಮ್ ಸೇರಿದಂತೆ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು. ಕೊತ್ತಗೆರೆ ಕೆರೆಯಲ್ಲಿ ಗಣೇಶನ ಮೂರ್ತಿ ವಿಸರ್ಜಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.