ತಿಪಟೂರು (ತುಮಕೂರು): ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಮಾಜಿ ಸಚಿವ ವಿ. ಸೋಮಣ್ಣ ವಿರುದ್ಧ ಬಿಜೆಪಿ ಕಾರ್ಯಕರ್ತರು ಭಾನುವಾರ ‘ಗೋ ಬ್ಯಾಕ್ ಸೋಮಣ್ಣ’ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ ತಾಲ್ಲೂಕಿನ ನೂರಾರು ಬಿಜೆಪಿ ಕಾರ್ಯಕರ್ತರು ಕಿಬ್ಬನಹಳ್ಳಿ ಕ್ರಾಸ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು.
ತುಮಕೂರು ಸಂಸದ ಜಿ.ಎಸ್. ಬಸವರಾಜು ಹಾಗೂ ವಿ.ಸೋಮಣ್ಣ ವಿರುದ್ಧ ಧಿಕ್ಕಾರ ಕೂಗಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
ಮಾಧುಸ್ವಾಮಿ ಅವರ ಅಭಿಮಾನಿಯೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾದ. ತಕ್ಷಣ ಪೊಲೀಸರು ಆತನನ್ನು ತಡೆದರು.
‘ಹೊರಗಿನವರಿಗೆ ಟಿಕೆಟ್ ನೀಡಿದರೆ ಗೆಲ್ಲುವುದು ಕಷ್ಟ. ತುಮಕೂರು ಕ್ಷೇತ್ರದಿಂದ ಇದುವರೆಗೂ ಹೊರಗಿನ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದ ಉದಾಹರಣೆ ಇಲ್ಲ. ಸಂಸದ ಬಸವರಾಜು ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷವನ್ನು ಬಲಿ ಕೊಡಲು ಹೊರಟಿದ್ದಾರೆ’ ಎಂದು ಪ್ರತಿಭಟನಕಾರರು ವಾಗ್ದಾಳಿ ನಡೆಸಿದರು.
ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸಂಸದ ಮತ್ತು ಮಠಾಧೀಶರನ್ನು ಭೇಟಿಯಾದರೆ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ ಎಂದು ಆಕ್ರೋಶ ಹೊರ ಹಾಕಿದರು.
ಸೋಮಣ್ಣ ಅವರಿಗೆ ಟಿಕೆಟ್ ನೀಡದಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲೂ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
‘ಸಂಸದ ಜಿ.ಎಸ್. ಬಸವರಾಜು ಅವರ ಚಿತಾವಣೆಯಿಂದ ಸೋಮಣ್ಣ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ಸೋಲು ಖಚಿತ’ ಎಂದು ಕಾರ್ಯಕರ್ತರು ಬಹಿರಂಗವಾಗಿ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.