ADVERTISEMENT

ಕ್ಯಾಮೇನಹಳ್ಳಿ ಆಂಜನೇಯ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 4:15 IST
Last Updated 26 ಜನವರಿ 2026, 4:15 IST
ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದ ಭಕ್ತರು
ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದ ಭಕ್ತರು   

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿಯ ಎದುರು ಮುಖದ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ನೆರವೇರಿತು.

ತಾಲ್ಲೂಕು, ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳಿಂದ ಬಂದ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಗೃಹ ಸಚಿವ ಜಿ. ಪರಮೇಶ್ವರ ತೇರು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ರಥೋತ್ಸವ ಪ್ರಾರಂಭದ ವೇಳೆ ಗರುಡ ರಥದ ಸುತ್ತ ಪ್ರದಕ್ಷಣೆ ಹಾಕಿತು. ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರ ಹರ್ಷೋದ್ಗಾರ ಮೊಳಗಿತು. ‘ಗೋವಿಂದಾ’ ಎಂದು ಕೂಗುತ್ತಾ ಉತ್ಸಾಹದಿಂದ ತೇರು ಎಳೆದರು. ಸಚಿವ ಪರಮೇಶ್ವರ ಕೂಡ ಕೈ ಜೋಡಿಸಿದರು. ಬಾಳೆ ಹಣ್ಣಿಗೆ ದವನ ಸಿಕ್ಕಿಸಿ ರಥಕ್ಕೆ ಸಮರ್ಪಿಸಿದರು.

ರಥೋತ್ಸವದ ಅಂಗವಾಗಿ ಬಿದಲೋಟಿ, ಕ್ಯಾಮೇನಹಳ್ಳಿ, ಹೊನ್ನಾರನಹಳ್ಳಿ, ತಿಮ್ಮನಹಳ್ಳಿ, ತುಂಬಗಾನಹಳ್ಳಿ, ಕೋಡ್ಲಹಳ್ಳಿ ಎಚ್.ವಿ.ಪಾಳ್ಯ ಗ್ರಾಮಗಳಲ್ಲಿ ಹಬ್ಬದ ವಾತಾವರಣ ಇತ್ತು. ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪಾಳ್ಯ, ಅಕ್ಕಾಜಿಹಳ್ಳಿ, ದೊಡ್ಡಪಾಳ್ಯ, ಹೊಸಪಾಳ್ಯ, ಅವುದಾರನಹಳ್ಳಿ ಗ್ರಾಮಗಳಿಂದ ರಥೋತ್ಸವಕ್ಕೂ ಮೂರು ದಿನಗಳ ಮುನ್ನ ಆರತಿ ಸೇವೆ ನಡೆಯಿತು.

ಹೊನ್ನಾರನಹಳ್ಳಿ, ತಿಮ್ಮನಹಳ್ಳಿ ಗ್ರಾಮಗಳಿಂದ ಸಂಜೆ ಆರತಿ ಉತ್ಸವ ನಡೆಯಿತು. ಚಿಕ್ಕಪಾಳ್ಯ, ಅಕ್ಕಾಜಿಹಳ್ಳಿ ಸುತ್ತಮುತ್ತಲ ಗ್ರಾಮಸ್ಥರ ಮುಂದಾಳತ್ವದಲ್ಲಿ ಸಂಜೆ ತೇರಿನ ಉತ್ಸವ ನಡೆಯುತ್ತದೆ. ಅಕ್ಕಿರಾಂಪುರ, ಚಿಕ್ಕಪಾಳ್ಯ, ಅಕ್ಕಾಜಿಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ಹಾಗೂ ತಾಲ್ಲೂಕು ಆಡಳಿತದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾತ್ರಿ ಪೌರಾಣಿಕ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಡಿವೈಎಸ್‌ಪಿ ಕೆ.ಆರ್.ಚಂದ್ರಶೇಖರ್, ತಹಶೀಲ್ದಾರ್ ಕೆ.ಮಂಜುನಾಥ್, ತಾ.ಪಂ.ಇಒ ಅಪೂರ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಅಧ್ಯಕ್ಷೆ ಜಯಮ್ಮ ಪಾಲ್ಗೊಂಡಿದ್ದರು.

ಗೃಹ ಸಚಿವ ಜಿ. ಪರಮೇಶ್ವರ ಅವರು ಪೂಜೆ ಸಲ್ಲಿಸಿ ತೇರು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.