ADVERTISEMENT

ತುಮಕೂರು: ಜಿಲ್ಲೆಯ ಹಲವೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 16:27 IST
Last Updated 23 ಜುಲೈ 2020, 16:27 IST
ತುಮಕೂರಿನಲ್ಲಿ ಗುರುವಾರ ಸಂಜೆ ಸುರಿದ ಮಳೆಯಲ್ಲಿ ಬೈಕ್ ಸವಾರರೊಬ್ಬರು ಸಾಗಿದ ನೋಟ
ತುಮಕೂರಿನಲ್ಲಿ ಗುರುವಾರ ಸಂಜೆ ಸುರಿದ ಮಳೆಯಲ್ಲಿ ಬೈಕ್ ಸವಾರರೊಬ್ಬರು ಸಾಗಿದ ನೋಟ   

ತುಮಕೂರು: ತುಮಕೂರು ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಗುರುವಾರ ರಾತ್ರಿ ಉತ್ತಮ ಮಳೆ ಸುರಿಯಿತು. ತುಮಕೂರು ನಗರದಲ್ಲಿ ಸಂಜೆ ಆರಂಭವಾದ ಮಳೆ 7 ಗಂಟೆ ಸುಮಾರಿನಲ್ಲಿ ಬಿರುಸು ಪಡೆಯಿತು. ರಾತ್ರಿ ಉತ್ತಮ ಮಳೆ ಸುರಿಯಿತು.

ಕೋರ ಹೋಬಳಿ, ಗುಬ್ಬಿ, ತುರುವೇಕೆರೆ, ತೋವಿನಕೆರೆ ಭಾಗಗಳಲ್ಲಿಯೂ ಉತ್ತಮವಾದ ಮಳೆ ಸುರಿಯಿತು.

ರಾತ್ರಿ ಮನೆಗಳಿಂದ ಖರೀದಿ ಇತ್ಯಾದಿ ಕಾರಣಕ್ಕೆ ಹೊರಗೆ ಬಂದಿದ್ದ ಜನರು ಮನೆಗಳಿಗೆ ತೆರಳಲು ಪರದಾಡಿದರು. ಅಂಗಡಿಗಳ ಬಳಿ ಆಶ್ರಯ ಪಡೆದರು. ರಸ್ತೆ ಮತ್ತು ರಸ್ತೆ ಬದಿಯ ಚರಂಡಿಗಳಲ್ಲಿ ಮಳೆ ನೀರು ತುಂಬಿತು.

ADVERTISEMENT

ತುಮಕೂರು ನಗರದ ಮೆಳೆಕೋಟೆ ಮುಖ್ಯರಸ್ತೆಯಲ್ಲಿರುವ ತಗ್ಗುಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಆರ್‌.ಟಿ.ನಗರದ ದೊಡ್ಡ ಚರಂಡಿ ಉಕ್ಕಿ ಹರಿದ ಪರಿಣಾಮ ಸುತ್ತಲ ಮನೆಗಳಿಗೆ ನೀರು ನುಗ್ಗಿತು.

‘ಪ್ರತಿ ವರ್ಷವೂ ಇದೇ ರೀತಿಯಲ್ಲಿ ಸಮಸ್ಯೆ ಆಗುತ್ತಿದೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಯಾವ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ ಎನ್ನುವ ಬಗ್ಗೆ ಪಾಲಿಕೆ ಅಧಿಕಾರಿಗಳು ಒಂದು ತಂಡವನ್ನು ಮಾಡಿಕೊಂಡು ಕೆಲಸ ಮಾಡಬೇಕು’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಆಗ್ರಹಿಸುವರು.

ಹುಳಿಯಾರು ವರದಿ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಗುರುವಾರ ಸಂಜೆ ಹದ ಮಳೆಯಾಗಿದ್ದು, ಬಿತ್ತನೆಗೆ ಅನುವು ಮಾಡಿಕೊಟ್ಟಿದೆ.

ಬೆಳಿಗ್ಗೆ ಬಿಸಿಲು ವಾತಾವರಣವಿತ್ತು. ಸಂಜೆ ವೇಳೆಗೆ ಮೋಡ ಸೃಷ್ಟಿಯಾಗಿ ಉತ್ತಮ ಮಳೆ ಬರುವ ಮುನ್ಸೂಚನೆ ನೀಡಿತ್ತು. ಗಾಳಿ ಬೀಸಿದ ಪರಿಣಾಮ ಬರೀ ಹದ ಮಳೆಗೆ ಸೀಮಿತವಾಯಿತು.

ಹುಳಿಯಾರು ಪಟ್ಟಣ ಸೇರಿದಂತೆ ಹೊಯ್ಸಳಕಟ್ಟೆ ಭಾಗದಲ್ಲಿ ಹದ ಮಳೆಯಾಯಿತು. ರಾಗಿ, ನವಣೆ ಬಿತ್ತನೆಗೆ ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.