
ತುಮಕೂರಿನಲ್ಲಿ ಸೋಮವಾರ ಪೊಲೀಸರಿಗೆ ಪೀಕ್ ಕ್ಯಾಪ್‌ಅನ್ನು ಗೃಹ ಸಚಿವ ಜಿ.ಪರಮೇಶ್ವರ, ಶಾಸಕ ಟಿ.ಬಿ.ಜಯಚಂದ್ರ, ಸಿ.ಬಿ.ಸುರೇಶ್‌ಬಾಬು, ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್ ಇತರರು ವಿತರಿಸಿದರು
ತುಮಕೂರು: ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮದ ಭಾಗವಾಗಿ ಗೃಹ ಸಚಿವ ಜಿ.ಪರಮೇಶ್ವರ ನಗರದ ಜಯನಗರದ ಮನೆಗಳಿಗೆ ಸೋಮವಾರ ಭೇಟಿ ನೀಡಿ ಜನರ ಅಹವಾಲು ಕೇಳಿದರು.
‘ಸಾರ್ವಜನಿಕರ ಸಮಸ್ಯೆ ಆಲಿಸುವ ಉದ್ದೇಶದಿಂದ ಮನೆ ಬಾಗಿಲಿಗೆ ಪೊಲೀಸ್ ಎಂಬ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಏನಾದರೂ ತೊಂದರೆಯಾದರೆ ಪೊಲೀಸ್ ಸಿಬ್ಬಂದಿ ಬಳಿ ತಿಳಿಸುವಂತೆ’ ಅರಿವು ಮೂಡಿಸಿದರು.
‘ಈ ಭಾಗದಲ್ಲಿ ಹೆಚ್ಚಿನ ಸಮಸ್ಯೆಗಳು ಇಲ್ಲ. ವಿದ್ಯುತ್ ದೀಪ ಬೆಳಗುವುದಿಲ್ಲ. ರಾತ್ರಿಯಾದರೆ ಕತ್ತಲು ಆವರಿಸುತ್ತದೆ. ದೀಪದ ವ್ಯವಸ್ಥೆ ಮಾಡಿದರೆ ರಸ್ತೆಯಲ್ಲಿ ಓಡಾಡುವವರಿಗೆ ಅನುಕೂಲವಾಗುತ್ತದೆ’ ಎಂದು ಜಯನಗರದ ನಿವಾಸಿಗಳು ಸಚಿವರ ಗಮನಕ್ಕೆ ತಂದರು.
ಇದಕ್ಕೂ ಮುನ್ನ ಜಯನಗರ ಪೊಲೀಸ್ ಠಾಣೆಯ ಹೊಸ ಕಟ್ಟಡ, ಪೊಲೀಸ್ ವಸತಿ ಗೃಹ, ಸೈಬರ್ ತರಬೇತಿ ವಿಭಾಗವನ್ನು ಸಚಿವರು ಉದ್ಘಾಟಿಸಿದರು. ನಂತರ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗೆ ‘ಪೀಕ್ ಕ್ಯಾಪ್’ ವಿತರಿಸಿ ಮಾತನಾಡಿದರು.
‘ಪೊಲೀಸ್ ಸಿಬ್ಬಂದಿಗೆ ರಾಜ್ಯದಲ್ಲಿ 33 ಸಾವಿರ ಮನೆ ನಿರ್ಮಿಸಲಾಗಿದೆ. ಈಗಾಗಲೇ ಶೇ 60ರಷ್ಟು ಸಿಬ್ಬಂದಿಗೆ ಮನೆ ನೀಡಲಾಗಿದೆ. ಇನ್ನೂ ಶೇ 40ರಷ್ಟು ಆಗಬೇಕು. ವಸತಿ ಗೃಹ ನಿರ್ಮಾಣಕ್ಕೆ ₹2 ಸಾವಿರ ಕೋಟಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ’ ಎಂದು ತಿಳಿಸಿದರು.
ಕಳೆದ ಎರಡು ವರ್ಷದಲ್ಲಿ ಶೇ 99ರಷ್ಟು ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಪತ್ತೆಗೆ ಆಧುನಿಕ ತಂತ್ರಜ್ಞಾನ ನೆರವಾಗುತ್ತಿದೆ. ಪೊಲೀಸ್ ಠಾಣೆಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ‘ಪೀಕ್ ಕ್ಯಾಪ್’ ವಿತರಣೆ ರಾಜ್ಯದ ಪೊಲೀಸರಲ್ಲಿ ಹೊಸ ಚೈತನ್ಯ ತುಂಬಿದೆ. ಹಲವು ವರ್ಷಗಳ ಬೇಡಿಕೆ ಈಗ ಈಡೇರಿದೆ ಎಂದರು.
ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಸಿ.ಬಿ.ಸುರೇಶ್‌ಬಾಬು, ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ, ಹಿರಿಯ ಅಧಿಕಾರಿಗಳಾದ ಜೆ.ಅರುಣ್ ಚಕ್ರವರ್ತಿ, ಲಾಬೂರಾಮ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮೊದಲಾದವರು ಭಾಗವಹಿಸಿದ್ದರು.
ಸೈಬರ್ ಅಪರಾಧ ಸಿಬ್ಬಂದಿಗೆ ತರಬೇತಿ
ರಾಜ್ಯ ಸೇರಿ ದೇಶದ ಎಲ್ಲೆಡೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ವಂಚನೆ ತಡೆಗೆ ಪೊಲೀಸ್ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ನಗರದಲ್ಲಿ ಸೈಬರ್ ತರಬೇತಿ ವಿಭಾಗ ಆರಂಭಿಸಲಾಗಿದೆ ಎಂದು ಪರಮೇಶ್ವರ ಹೇಳಿದರು.
ಅಪರಾಧ ಸಂಖ್ಯೆ ಜಾಸ್ತಿಯಾಗುತ್ತಿದ್ದು, ನಾವು ಹಿಂದೆ ಬಿದ್ದರೆ ಬಹಳಷ್ಟು ಜನರಿಗೆ ತೊಂದರೆಯಾಗುತ್ತದೆ. ಮುಂದಿನ 10 ತಿಂಗಳಲ್ಲಿ ಜಿಲ್ಲೆಯ ಪ್ರತಿ ಸಿಬ್ಬಂದಿಗೂ ಸೈಬರ್ ಅಪರಾಧದ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.