ADVERTISEMENT

ಧರಣಿ ಬಿಡಾರಕ್ಕೆ ಬೆಂಕಿ

ಸತ್ಯಾಗ್ರಹ ಹತ್ತಿಕ್ಕುವ ಯತ್ನ: ಪ್ರತಿಭಟನೆ ನಿರತರ ಆರೋಪ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 7:27 IST
Last Updated 29 ಡಿಸೆಂಬರ್ 2025, 7:27 IST
ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಬಿಡಾರಕ್ಕೆ ಶನಿವಾರ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು
ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಬಿಡಾರಕ್ಕೆ ಶನಿವಾರ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು   

ಹುಳಿಯಾರು: ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ರೈತಸಂಘದ ಹೊಸಳ್ಳಿ ಚಂದ್ರಪ್ಪ ನೇತೃತ್ವದಲ್ಲಿ 81 ದಿನಗಳಿಂದ ನಡೆಯುತ್ತಿದ್ದ ಸತ್ಯಾಗ್ರಹದ ಬಿಡಾರಕ್ಕೆ ಶನಿವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಪ್ರತಿಭಟನೆ ನಿರತರು ಆರೋಪಿಸಿದ್ದಾರೆ.

ಸಂತೆ ಮೈದಾನ, ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಸೇರಿದಂತೆ ವಿವಿಧ ಮೂಲ ಸೌಕರ್ಯಗಳಿಗೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತಿತ್ತು. 15 ದಿನಗಳಿಂದ ಆಹೋರಾತ್ರಿ ಧರಣಿ ಕೈಬಿಟ್ಟು ಪ್ರತಿದಿನ ಏಕವ್ಯಕ್ತಿ ಉಪವಾಸದ ಜತೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಧರಣಿ ನಡೆಯುತ್ತಿತ್ತು. ಕುಳಿತುಕೊಳ್ಳಲು ಬಿಡಾರ ಹಾಕಿಕೊಳ್ಳಲಾಗಿತ್ತು. ಆದರೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ ಎಂದು ದೂರಿದರು.

ರೈತಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ, ಧರಣಿ ದಮನಗೊಳಿಸಲು ಬಿಡಾರ ಸುಟ್ಟಿದ್ದಾರೆ. ಇದರ ಜತೆ ರೈತಸಂಘದ ಬ್ಯಾನರ್‌ ಸುಟ್ಟು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಭಾವಚಿತ್ರ ಸುಡುವ ಮೂಲಕ ರೈತರಿಗೆ ಅವಮಾನ ಮಾಡಿದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ಅಂಜುವುದಿಲ್ಲ ಎಂದರು.

ADVERTISEMENT

ತಹಶಿಲ್ದಾರ್‌ ಭೇಟಿ: ಘಟನೆ ಸ್ಥಳಕ್ಕೆ ತಹಶಿಲ್ದಾರ್‌‌ ಎಂ.ಮಮತಾ ಭೇಟಿ ನೀಡಿ ಪರಿಶೀಲಿಸಿದರು. ರೈತ ಮುಖಂಡ ಹೊಸಹಳ್ಳಿ ಚಂದ್ರಣ್ಣ ಹಾಗೂ ಹೋರಾಟಗಾರರ ಜತೆ ಮಾತುಕತೆ ನೆಡಸಿದರು. ಈಗಾಗಲೇ ನಿಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಲಾಗಿದ್ದು ಉಳಿದ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವುದರಿಂದ ಪ್ರತಿಭಟನೆ ಕೈ ಬಿಡಿ ಎಂದು ಮನವಿ ಮಾಡಿದರು. 

‘ಸಂತೆಯನ್ನು ಈಗಾಗಲೇ ನಿರ್ಧರಿಸಿರುವ ಎಪಿಎಂಸಿ ಆವರಣದ ಮುಂಭಾಗಕ್ಕೆ ಸ್ಥಳಾಂತರಿಸಲು ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಪಟ್ಟಣ ಸಮೀಪ ಅಂದರೆ ಆರೇಳು ಕಿ.ಮೀ ದೂರದಲ್ಲಿ ಸ್ಥಾಪಿಸುವ ಒಪ್ಪಿಗೆ ನೀಡಿದ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ’ ಎಂದು ರೈತಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.