ADVERTISEMENT

ಹುಳಿಯಾರು: ಕನಕದಾಸ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 15:55 IST
Last Updated 29 ನವೆಂಬರ್ 2024, 15:55 IST
ಹುಳಿಯಾರು ಪಟ್ಟಣದ ಕನಕ ವೃತ್ತದಲ್ಲಿ ಅನಾವರಣಗೊಂಡ ಕನಕದಾಸರ ಕಂಚಿನ ಪುತ್ಥಳಿ
ಹುಳಿಯಾರು ಪಟ್ಟಣದ ಕನಕ ವೃತ್ತದಲ್ಲಿ ಅನಾವರಣಗೊಂಡ ಕನಕದಾಸರ ಕಂಚಿನ ಪುತ್ಥಳಿ   

ಹುಳಿಯಾರು: ‘600 ವರ್ಷಗಳ ಹಿಂದೆ ಕನಕರಿಗೆ ಆಗಿದ್ದ ಅವಮಾನ ಮಾದರಿಯಲ್ಲಿ ಹುಳಿಯಾರು ಪಟ್ಟಣದಲ್ಲಿ ಕನಕ ವೃತ್ತ ನಾಮಕರಣಕ್ಕೂ ಅಡ್ಡಿ ಅತಂಕ ಹಾಗೂ ಅವಮಾನ ಒದಗಿ ಬಂದಿತ್ತು. ಆದರೆ ಕನಕದಾಸರು ಒಂದು ಕುಲಕ್ಕೆ ಸೀಮಿತ ವ್ಯಕ್ತಿಯಾಗಿ ನೋಡದೆ ಎಲ್ಲ ಶೋಷಿತ ವರ್ಗಗಳ ಪ್ರತೀಕ ಎಂದು ಮನಗಾಣಬೇಕು’ ಎಂದು ಹೊಸದುರ್ಗ ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕನಕ ವೃತ್ತದಲ್ಲಿ ಶುಕ್ರವಾರ ನಡೆದ ಕನಕದಾಸರ ಕಂಚಿನ ಪುತ್ಥಳಿ ಲೋಕಾರ್ಪಣೆ ಮತ್ತು ಕನಕದಾಸರ ಜಯಂತಿಯಲ್ಲಿ ಮಾತನಾಡಿದರು.

ಇಂದಿಗೂ ಕೆಲ ಮಠಗಳು ಮೇಲು, ಕೀಳು ಎಂಬ ತಾರತಮ್ಯ ಮಾಡುತ್ತಿದ್ದು ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ ಎಂದರು.

ADVERTISEMENT

ರಾಜ್ಯದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಮೂರು ವರ್ಷಗಳ ಹಿಂದೆ ಹುಳಿಯಾರಿನಲ್ಲಿ ಕನಕ ವೃತ್ತದ ವಿವಾದ ರಾಜ್ಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಸ್ವಾಮೀಜಿ ಒಬ್ಬರಿಗೆ ಅವಮಾನವನ್ನು ಮಾಡಲಾಗಿತ್ತು. ಆದರೆ ಹಿರಿಯ ಸ್ವಾಮೀಜಿಗಳ ಮಾತಿಗೆ ಬೆಲೆತೆತ್ತು ಪ್ರಕರಣ ಅಂತ್ಯವಾಗಿತ್ತು. ಆದರೆ ಕನಕರನ್ನು ಒಂದು ಜಾತಿಗೆ ಸೀಮಿತವಾಗಿ ನೋಡುವುದನ್ನು ಬಿಟ್ಟು ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.

ಕನಕದಾಸರ ಬಗ್ಗೆ ಉಪನ್ಯಾಸ ನೀಡಿದ ನಿಕೇತ್ ರಾಜ್ ಮೌರ್ಯ, ಕನಕದಾಸರ ಕುರಿತು ದಾಸ ಪರಂಪರೆಯ ಪುರಂದರ ದಾಸರು ‘ಎಂದಿಗೂ ಕನಕನನ್ನು ಕೆಣಕಬೇಡಿ’ ಎಂದು ಹಿಂದೆಯೇ ಹೇಳಿದ್ದಾರೆ. ಕನಕದಾಸರು ರಾಜನಾಗುವ ಅವಕಾಶವಿದ್ದರೂ ಸಮಾಜದ ಅಂಕುಡೊಂಕು ತಿದ್ದಲು ಕತ್ತಿ ತೆಗೆದು ಹಾಕಿ ಕೈಯಲ್ಲಿ ತಂಬೂರಿ ಹಿಡಿದು ಹೆಗಲಮೇಲೆ ಕಂಬಳಿ ಹಾಕಿಕೊಂಡು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಒಳಿತಿಗೆ ದುಡಿದಿದ್ದಾರೆ ಎಂದರು.

ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ಮಾಡಿವಾಳ ಮಾಚೀದೇವ ಪೀಠದ ಮಡಿವಾಳ ಮಾಚೀದೇವ ಸ್ವಾಮೀಜಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ, ವಿಧಾನ ಪರಿಷತ್‌ ಸದಸ್ಯ ಸಿ.ಎ.ತಿಪ್ಪೇಸ್ವಾಮಿ, ಹಾಲುಮತ ಮಹಾ ಸಭಾದ ಮಾಜಿ ಅಧ್ಯಕ್ಷ ರುದ್ರಣ್ಣ ಗುಳಗಳಿ, ಶಾಸಕ ಸಿ.ಬಿ.ಸುರೇಶ್‌ಬಾಬು ಹಾಜರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕನಕ ವೃತ್ತದಲ್ಲಿ ದೀಪಾಲಂಕಾರದಿಂದ ಅಲಂಕೃತಗೊಂಡ ಮಂಟಪದಲ್ಲಿ ಹೋಮ ಹವನ ಪೂಜಾ ಕಾರ್ಯಗಳೊಂದಿಗೆ ದಾಸಶ್ರೇಷ್ಠರ ಕಂಚಿನ ಪುತ್ಥಳಿ ಲೋಕಾರ್ಪಣೆಗೊಂಡಿತು. ಹುಳಿಯಾರಿನ ಪ್ರಮುಖ ಬೀದಿಗಳಲ್ಲಿ ಕನಕದಾಸರ ಮೂರ್ತಿ ಮತ್ತು ಈಶ್ವರಾನಂದಪುರಿ ಸ್ವಾಮೀಜಿ ಮೆರವಣಿಗೆ ನಡೆಯಿತು.

ಹುಳಿಯಾರಿನಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನದದಾಸರ ಮೂರ್ತಿ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.