ಹುಳಿಯಾರು: ಪಟ್ಟಣದ ನಾಡಕಚೇರಿ ಎದುರು ಪ್ರತಿದಿನ ಬೆಳಿಗ್ಗೆ ನಡೆಯುವ ತರಕಾರಿ ಮತ್ತು ಸೊಪ್ಪಿನ ಮಾರುಕಟ್ಟೆಯಲ್ಲಿ ರೈತರಿಂದ ಸುಂಕ ವಸೂಲಿ ಮಾಡುವ ವಿಚಾರ ಶುಕ್ರವಾರ ತೀವ್ರ ಪ್ರತಿಭಟನೆಗೆ ಕಾರಣವಾಯಿತು.
ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಪ್ಪ ಹಾಗೂ ಗುತ್ತಿಗೆದಾರ ಚೆನ್ನಕೇಶವ ನಡುವೆ ತೀವ್ರ ವಾಗ್ವಾದ ನಡೆಯಿತು.
ಚಂದ್ರಪ್ಪ ಮಾತನಾಡಿ, ‘ಮಾರುಕಟ್ಟೆಯನ್ನು ರೈತರ ಅನೂಕೂಲಕ್ಕಾಗಿ ನಿರ್ಮಿಸಿದ್ದು, ಇದು ರೈತರ ಹೋರಾಟದ ಫಲ. ನಮ್ಮದೇ ಖರ್ಚಿನಲ್ಲಿ, ನಮ್ಮದೇ ಶ್ರಮದಲ್ಲಿ ₹25 ಸಾವಿರ ವೆಚ್ಚ ಮಾಡಿ ಈ ಮಾರುಕಟ್ಟೆ ಶುರುಮಾಡಿಸಿದ್ದೇವೆ. ಇಲ್ಲಿಂದ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಯಾರೂ ಸುಂಕ ಪಾವತಿಸಬೇಕಿಲ್ಲ’ ಎಂದು ಸ್ಪಷ್ಟಪಡಿಸಿದರು.
ಕರ ವಸೂಲಿ ಗುತ್ತಿಗೆದಾರ ಚೆನ್ನಕೇಶವ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ‘ನಾನು ರೈತರಿಂದ ಯಾವುದೇ ಹಣ ವಸೂಲಿ ಮಾಡಿಲ್ಲ. ಇಲ್ಲಿರುವ ವಾಣಿಜ್ಯ ಮಳಿಗೆಗಳಿಂದ ಮಾತ್ರ ವಸೂಲಿ ಮಾಡುತ್ತಿದ್ದೇನೆ. ನಿಯಮಾನುಸಾರ ಗುತ್ತಿಗೆ ತೆಗೆದುಕೊಂಡಿದ್ದೇವೆ. ಈಗ ನೀವು ಆಕ್ಷೇಪ ಮಾಡಿದರೆ ನನಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ. ಮುಂದಿನ ಆರ್ಥಿಕ ವರ್ಷದಿಂದ (ಮಾರ್ಚ್ ಗುತ್ತಿಗೆಯಲ್ಲಿ) ಈ ಬೆಳಗಿನ ಸಂತೆಯಲ್ಲಿ ಕರ ವಸೂಲಿ ಬಿಟ್ಟುಬಿಡುವಂತೆ ಒತ್ತಾಯಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ, ಮಾರ್ಚ್‌ವರೆಗೆ ಇರುವ ಮುಂದಿನ ಆರು ತಿಂಗಳ ಹಣವನ್ನು ನನಗೆ ಹಿಂದಿರುಗಿಸುವಂತೆ ಪಟ್ಟಣ ಪಂಚಾಯಿತಿಗೆ ತಿಳಿಸಿ’ ಎಂದು ಕೇಳಿಕೊಂಡರು.
ಗುತ್ತಿಗೆದಾರರ ಈ ವಾದಕ್ಕೆ ರೈತರು ಒಪ್ಪದೆ, ಘೋಷಣೆಗಳನ್ನು ಕೂಗಿದರು.
‘ಇಲ್ಲಿ ರೈತರಿಂದ ಸುಂಕ ವಸೂಲಿಗೆ ಅವಕಾಶವೇ ಇಲ್ಲ. ಯಾರಿಗೂ ಒಂದು ಬಿಡಿಗಾಸು ಕೊಡೋದಿಲ್ಲ ಎಂದು ಘೋಷಣೆಗಳನ್ನು ಕೂಗಿದರು. ಕೆಲವು ರೈತರು ಬೆಳ್ಳಿಗೆಯೇ ನಾವು ವ್ಯಾಪಾರಕ್ಕೆ ಬಂದು ಕುಳಿತರೂ ನಮಗಾಗುವ ₹200- ₹300 ವ್ಯಾಪಾರದಲ್ಲಿ ₹30 ಸುಂಕ ಕೊಡುವುದು ಹೇಗೆ ಸಾಧ್ಯ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಅಧ್ಯಕ್ಷ ಹೊಸಹಳ್ಳಿ ಚಂದ್ರಪ್ಪ, ತಾಲ್ಲೂಕು ಗೌರವಾಧ್ಯಕ್ಷ ಕರಿಯಪ್ಪ, ಸೋಮಜ್ಜನ ಪಾಳ್ಯದ ಪುಟ್ಟಯ್ಯ, ಪುಷ್ಪಾಭಾಯಿ, ನಾಗಪ್ಪ, ಕಲ್ಲಳ್ಳಿ ಕುಮಾರ್, ಬಿ.ಲಕ್ಷ್ಮಿ, ನೀರಾ ಈರಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.