ADVERTISEMENT

ತುಮಕೂರು | ಹೈನುಗಾರಿಕೆಯತ್ತ ಯುವಕರ ಒಲವು: ಹಾಲು ಉತ್ಪಾದನೆ‌ ಏರಿಕೆ

ಲಾಕ್‌ಡೌನ್‌, ಕೊರೊನಾ ಭೀತಿಯಿಂದಾಗಿ ಹಳ್ಳಿಗೆ ಮರಳಿದ ಜನರಿಗೆ ಆಸರೆಯಾದ ಹೈನುಗಾರಿಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 9:11 IST
Last Updated 9 ಜುಲೈ 2020, 9:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತುಮಕೂರು: ಲಾಕ್‌ಡೌನ್‌ನಿಂದಾಗಿ ಸಾವಿರಾರು ಮಂದಿ ತಮ್ಮ ಊರುಗಳಿಗೆ ಮರಳಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ತುಮುಲ್‌ಗೆ ಹರಿದು ಬರುತ್ತಿರುವ ಹಾಲಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ.

ಉದ್ಯೋಗ ಅರಸಿ ನಗರ, ಪಟ್ಟಣಗಳಲ್ಲಿ ನೆಲೆಸಿದ್ದ ಜಿಲ್ಲೆಯ ಸಾವಿರಾರು ಮಂದಿ ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡು ತಮ್ಮ ಹಳ್ಳಿಗಳಿಗೆ ಮರಳಿದ್ದಾರೆ. ಕೆಲವರು ಕೊರೊನಾ ಸೋಂಕಿನ ಭೀತಿಯಿಂದಾಗಿ ಬೇರೆ ಜಿಲ್ಲೆ, ಊರುಗಳಿಗೆ ಹೋಗದೆ ಹಳ್ಳಿಗಳಲ್ಲೇ ನೆಲೆಯೂರಿದ್ದಾರೆ.

ಇವರಲ್ಲಿ ಬಹುಪಾಲು ಮಂದಿ ಕೂಡಿಟ್ಟ ಹಣದಲ್ಲಿ ಕುರಿ, ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಹಸು, ಎಮ್ಮೆ ಖರೀದಿಸಿ ಹೈನುಗಾರಿಕೆಯಲ್ಲಿ ನಿರತರಾಗಿದ್ದಾರೆ. ಹಾಗಾಗಿ ಸಹಜವಾಗಿಯೇ ತುಮುಲ್‌ಗೆ ಪೂರೈಕೆಯಾಗುತ್ತಿರುವ ಹಾಲಿನ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ.

ADVERTISEMENT

2 ಲಕ್ಷ ಲೀಟರ್ ಹೆಚ್ಚಳ: ತುಮುಲ್‌ಗೆ ಮಾರ್ಚ್‌ನಲ್ಲಿ ಕೇವಲ 6.30 ಲಕ್ಷ ಲೀಟರ್‌ ಹಾಲು ಸರಬರಾಜು ಆಗುತಿತ್ತು. ಏಪ್ರಿಲ್‌ನಲ್ಲಿ 6.50 ಲಕ್ಷ ಲೀಟರ್‌ಗೆ ಏರಿಕೆಯಾಯಿತು. ಮೇ ತಿಂಗಳಲ್ಲಿ 7 ಲಕ್ಷ ಲೀಟರ್, ಜೂನ್‌ನಲ್ಲಿ 7.30 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಆದರೆ, ಪ್ರಸ್ತುತ 8.60 ಲಕ್ಷ ಲೀಟರ್‌ ಪೂರೈಕೆ ಆಗುತ್ತಿದೆ. ಮಾರ್ಚ್‌ನಲ್ಲಿ 76 ಸಾವಿರ ಮಂದಿ ಹಾಲು ಪೂರೈಸುತ್ತಿದ್ದು, ಈ ಸಂಖ್ಯೆ ಇದೀಗ 80 ಸಾವಿರಕ್ಕೆ ಹೆಚ್ಚಳವಾಗಿದೆ.

ಯುವಕರೇ ಹೆಚ್ಚು: ಮನೆಯಲ್ಲಿ ತಂದೆ, ತಾಯಿ ಹೈನುಗಾರಿಕೆ ಅವಲಂಭಿಸಿದ್ದರೂ ಅನೇಕ ಯುವಕರು ಇದರಲ್ಲಿ ಆಸಕ್ತಿ ತೋರದೆ ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ಇತರೆ ಪಟ್ಟಣ ಸೇರಿದ್ದರು. ಆದರೆ, ಇದೀಗ ಅನೇಕರು ಊರುಗಳಿಗೆ ವಾಪಸ್‌ ಬಂದಿದ್ದು, ಮನೆಯವರ ಜತೆಗೆ ಸೇರಿಕೊಂಡು ಹೈನುಗಾರಿಕೆಯಲ್ಲಿ ನಿರತರಾಗಿದ್ದಾರೆ.

ಈ ಮೊದಲು ಹೈನುಗಾರಿಕೆಮಾಡಿ ಕೈಬಿಟ್ಟಿದ್ದವರು ಸಹ ಈಗ ಮುಂದುವರಿಸಿದ್ದಾರೆ. ಪರಿಣಾಮ ತುಮುಲ್‌ಗೆ ಹಾಲಿನ ಪೂರೈಕೆ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುತ್ತಾರೆ ತುಮುಲ್ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.