ADVERTISEMENT

ತುಮಕೂರು | ಕತ್ತಲಲ್ಲಿ ಇಂದಿರಾ ಕ್ಯಾಂಟೀನ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 7:00 IST
Last Updated 6 ಡಿಸೆಂಬರ್ 2025, 7:00 IST
ತುಮಕೂರಿನ ಮಂಡಿಪೇಟೆ ಇಂದಿರಾ ಕ್ಯಾಂಟೀನ್‌ಗೆ ಕತ್ತಲು ಆವರಿಸಿರುವುದು
ತುಮಕೂರಿನ ಮಂಡಿಪೇಟೆ ಇಂದಿರಾ ಕ್ಯಾಂಟೀನ್‌ಗೆ ಕತ್ತಲು ಆವರಿಸಿರುವುದು    

ತುಮಕೂರು: ಬಡವರು, ನಿರ್ಗತಿಕರ ಹಸಿವು ನೀಗಿಸುವ ಉದ್ದೇಶದಿಂದ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳು ಮತ್ತಷ್ಟು ಬಡವಾಗುತ್ತಿವೆ. ನಗರದ ಮಂಡಿಪೇಟೆಯ ಇಂದಿರಾ ಕ್ಯಾಂಟೀನ್‌ಗೆ ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಪೂರೈಕೆ‌ ಕಡಿತಗೊಂಡಿದ್ದು, ಮೇಣದ ಬತ್ತಿ ಬೆಳಕಲ್ಲಿ ಊಟ ಬಡಿಸಲಾಗುತ್ತಿದೆ.

ಕ್ಯಾಂಟೀನ್‌ ಗುತ್ತಿಗೆ ಪಡೆದ ಗುತ್ತಿಗೆದಾರ ವಿದ್ಯುತ್‌ ಬಿಲ್‌ ಪಾವತಿಸಿಲ್ಲ. ಹೀಗಾಗಿ ಕ್ಯಾಂಟೀನ್‌ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಕತ್ತಲು ಆವರಿಸಿದೆ. ‘ಗುತ್ತಿಗೆ ನೀಡಿದ್ದೇವೆ, ಗುತ್ತಿಗೆದಾರರೇ ಇದಕ್ಕೆ ಜವಾಬ್ದಾರಿ’ ಎಂದು ಹೇಳುವ ಮೂಲಕ ಅಧಿಕಾರಿಗಳು ಕೈಚಲ್ಲಿ ಕುಳಿತಿದ್ದಾರೆ.

ನಗರದ 6 ಕ್ಯಾಂಟೀನ್‌ಗಳಲ್ಲಿ 18 ಜನ ಕೆಲಸ ಮಾಡುತ್ತಿದ್ದು, ಇವರಿಗೆ ಐದು ತಿಂಗಳಿಂದ ಸಂಬಳ ಪಾವತಿಸಿಲ್ಲ. ವೇತನ ನೆಚ್ಚಿಕೊಂಡಿರುವ ಸಿಬ್ಬಂದಿಗೆ ಬದುಕು ದೂಡುವುದು ಕಷ್ಟವಾಗಿದೆ. ತಿಂಗಳಿಗೆ ₹10 ಸಾವಿರ ವೇತನ ನಿಗದಿ ಪಡಿಸಲಾಗಿದೆ. ಇದುವರೆಗೆ ಪ್ರತಿ ತಿಂಗಳು ಅವರ ಖಾತೆಗೆ ಹಣ ಸಂದಾಯವಾಗಿಲ್ಲ. ಮೂರು–ನಾಲ್ಕು ತಿಂಗಳಿಗೊಮ್ಮೆ ಸಂಬಳ ಸಿಗುತ್ತಿದೆ. ಈ ಹಿಂದೆ ವೇತನ ನೀಡದ ಕಾರಣಕ್ಕೆ ಕ್ಯಾಂಟೀನ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರು. ನಂತರವೂ ಇಂದಿರಾ ಕ್ಯಾಂಟೀನ್‌ಗಳ ಪರಿಸ್ಥಿತಿ ಸುಧಾರಿಸಿಲ್ಲ. ಆಹಾರದ ಗುಣಮಟ್ಟ ಮತ್ತಷ್ಟು ಕುಸಿಯುತ್ತಲೇ ಸಾಗಿದೆ.

ADVERTISEMENT

ಎಲ್ಲ ಕ್ಯಾಂಟೀನ್‌ಗಳಲ್ಲಿ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿವೆ. ಕ್ಯಾನ್‌ ಮೂಲಕ ಹೊರಗಡೆಯಿಂದ ನೀರು ತರಿಸಲಾಗುತ್ತಿದೆ. ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ, ಮಹಾನಗರ ಪಾಲಿಕೆ ಮುಖ್ಯ ಕಚೇರಿಗೆ ಹೊಂದಿಕೊಂಡಂತೆ ಇರುವ ಮುಖ್ಯ ಕ್ಯಾಂಟೀನ್‌ನಲ್ಲಿ ನೀರಿನ ಮೋಟರ್‌ ಹಾಳಾಗಿದೆ. ಅಡುಗೆಗೆ ಸಂಪ್‌ ನೀರು ಬಳಸಲಾಗುತ್ತಿದೆ. ಈ ನೀರು ಎಷ್ಟು ಪರಿಶುದ್ಧ ಎಂಬುವುದು ಯಾರಿಗೂ ಗೊತ್ತಿಲ್ಲ. ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಊಟದ ನಂತರ ಕೈ ತೊಳೆಯಲೂ ನೀರು ಸಿಗದಾಗಿದೆ.

‘ಪ್ರತಿ ಕ್ಯಾಂಟೀನ್‌ನಲ್ಲಿ ಬೆಳಿಗ್ಗೆ 200 ಜನಕ್ಕೆ ತಿಂಡಿ, ಮಧ್ಯಾಹ್ನ 200 ಮತ್ತು ರಾತ್ರಿ 100 ಮಂದಿಗೆ ಊಟ ನೀಡಲಾಗುತ್ತಿದೆ’ ಎಂದು ಅಧಿಕಾರಿಗಳು ವಿವರಿಸುತ್ತಾರೆ. ಆದರೆ, ಯಾವುದೇ ಕ್ಯಾಂಟೀನ್‌ನಲ್ಲಿ ಇಷ್ಟು ಪ್ರಮಾಣದ ಜನ ಊಟ, ತಿಂಡಿ ಸೇವಿಸುತ್ತಿಲ್ಲ. ‘ಪ್ರಜಾವಾಣಿ’ ಪ್ರತಿನಿಧಿ ಪರಿಶೀಲಿಸಿದ ಸಮಯದಲ್ಲಿ ನಗರದ ಮಂಡಿಪೇಟೆ ಬಳಿಯ ಕ್ಯಾಂಟೀನ್‌ನಲ್ಲಿ ರಾತ್ರಿ ವೇಳೆ ಕನಿಷ್ಠ ಐವರೂ ಊಟ ಮಾಡಿದ್ದು ಕಂಡು ಬರಲಿಲ್ಲ.

‘ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿಗದಿಪಡಿಸಿದ ಆಹಾರ ನೀಡುತ್ತಿಲ್ಲ. ಬೆಳಿಗ್ಗೆ ಅನ್ನದಿಂದ ಮಾಡಿದ ತಿಂಡಿ, ಮಧ್ಯಾಹ್ನ ಅನ್ನ– ಸಾಂಬರ್ ಬಿಟ್ಟರೆ ಬೇರೇನೂ ಇರುವುದಿಲ್ಲ. ರುಚಿ ಇಲ್ಲದ ಊಟ ಬಾಯಿಗೆ ಇಡುವಂತಿಲ್ಲ. ನೆಪಮಾತ್ರಕ್ಕೆ ಕ್ಯಾಂಟೀನ್ ನಡೆಸಲಾಗುತ್ತಿದೆ. ಅವುಗಳ ಕಡೆಗೆ ಯಾರೂ ಕಣ್ಣೆತ್ತಿಯೂ ನೋಡುವುದಿಲ್ಲ. ಈಗ ಊಟಕ್ಕೆ ಬರುವುದು ಅಪರೂಪವಾಗಿದೆ’ ಎಂದು ರಾಜೀವ್ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು ರೈಲು ನಿಲ್ದಾಣ ರಸ್ತೆಯ ಕ್ಯಾಂಟೀನ್‌ನಲ್ಲಿ ನೀರಿನ ಕ್ಯಾನ್‌ ಬಳಕೆ
ಸಿಗದ ರಾಗಿ ಮುದ್ದೆ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಆರಂಭಿಸಿದ್ದ ರಾಗಿ ಮುದ್ದೆ ಚಪಾತಿ ಊಟ ನಿಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟಿಸಿದ್ದರು. ಆ ಸಮಯದಲ್ಲಿ ರಾಗಿ ಮುದ್ದೆ ಚಪಾತಿ ಊಟವನ್ನು ನಗರದ ಎಲ್ಲ ಕ್ಯಾಂಟೀನ್‌ಗಳಲ್ಲಿ ಆರಂಭಿಸಲಾಗಿತ್ತು. ಹದಿನೈದು ದಿನ ಮುದ್ದೆ ಊಟ ನೀಡಿ ನಂತರ ನಿಲ್ಲಿಸಲಾಗಿದೆ. ‘ಜನಪ್ರತಿನಿಧಿಗಳು ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ನೀಡಿದ ಸಮಯದಲ್ಲಿ ಮಾತ್ರ ಮುದ್ದೆ ಕಾಣಿಸುತ್ತದೆ. ಉಳಿದ ದಿನಗಳಲ್ಲಿ ಅನ್ನ ಸಾಂಬಾರ್‌ ಬಿಟ್ಟರೆ ಬೇರೇನೂ ಸಿಗುವುದಿಲ್ಲ. ಸಾಂಬಾರು ರುಚಿ ಇರುವುದಿಲ್ಲ ನೀರಿನಂತೆ ಇರುತ್ತದೆ. ಸಾಂಬಾರ್‌ಗೆ ತರಕಾರಿಯನ್ನೇ ಹಾಕುವುದಿಲ್ಲ’ ಎಂದು ವಿದ್ಯಾರ್ಥಿ ರೋಹಿತ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.