ADVERTISEMENT

ಒಳ ಮೀಸಲಾತಿ: 9ರಂದು ಪ್ರತಿಭಟನೆ

ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 4:31 IST
Last Updated 29 ಆಗಸ್ಟ್ 2024, 4:31 IST
ಎನ್.ಮೂರ್ತಿ
ಎನ್.ಮೂರ್ತಿ   

ತುಮಕೂರು: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಸೆ.9ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

‘ಮೀಸಲಾತಿಯು 101 ಜಾತಿಗಳಿಗೆ ಸಮನಾಗಿ ಹಂಚಿಕೆಯಾಗಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದ್ದು, ಹಲವು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ನ್ಯಾಯಾಲಯವು ಒಳ ಮೀಸಲಾತಿ ಜಾರಿಗೊಳಿಸುವ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಆದರೆ ಸರ್ಕಾರ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎನ್.ಮೂರ್ತಿ ಇಲ್ಲಿ ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಿಂದ ಮುಖ್ಯಮಂತ್ರಿ ನಿವಾಸದ ವರೆಗೆ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಯಾವುದೇ ಸಬೂಬು ಹೇಳದೆ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ADVERTISEMENT

ಸಚಿವರಾದ ಜಿ.ಪರಮೇಶ್ವರ, ಎಚ್‌.ಸಿ.ಮಹದೇವಪ್ಪ, ಪ್ರಿಯಾಂಕ್‌ ಖರ್ಗೆ ಸೇರಿದಂತೆ ದಲಿತ ಸಮುದಾಯ ಶಾಸಕರು ಒಳ ಮೀಸಲಾತಿ ಜಾರಿ ಕುರಿತು ತುಟಿ ಬಿಚ್ಚುತ್ತಿಲ್ಲ. ಇದು ಅವರ ಸೋಗಲಾಡಿತನಕ್ಕೆ ಸಾಕ್ಷಿಯಾಗಿದೆ. ಮೀಸಲಾತಿಯಿಂದ ಆಯ್ಕೆಯಾಗಿರುವ ಶಾಸಕರು ತಮ್ಮ ಸ್ಥಾನಕ್ಕೆ ನೀಡಲಿ ಎಂದರು.

ಗ್ಯಾರಂಟಿಗೆ ಬಳಸಿಕೊಳ್ಳುತ್ತಿರುವ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಕೂಡಲೇ ವಾಪಸ್‌ ನೀಡಬೇಕು. ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಯೋಜನೆ ಮರು ಜಾರಿಗೊಳಿಸಬೇಕು. ಒಳ ಮೀಸಲಾತಿ ಜಾರಿಯಾಗುವ ತನಕ ಎಲ್ಲ ನೇಮಕಾತಿ ಮುಂದೂಡಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್.ರಾಮಯ್ಯ, ಮುಖಂಡರಾದ ಎ.ರಂಜನ್, ಹಟ್ಟಪ್ಪ, ಪರಮೇಶ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.