
ತುಮಕೂರು: ಜೆಡಿಎಸ್ ಬಿಟ್ಟು ಹೋಗಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎಚ್.ನಿಂಗಪ್ಪ ಸ್ಪಷ್ಟಪಡಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನಂತರ ಪಕ್ಷ ಬಿಟ್ಟು ಹೊರಗೆ ಹೋಗಿರುವ ಸಾಕಷ್ಟು ಬಂದಿ ವಾಪಸ್ ಬರಲು ಒಲವು ತೋರಿಸಿದ್ದಾರೆ. ಹಲವರು ಸಂಪರ್ಕದಲ್ಲಿ ಇದ್ದಾರೆ. ಆದರೆ ಶ್ರೀನಿವಾಸ್, ಗೌರಿಶಂಕರ್ ನನ್ನ ಸಂಪರ್ಕದಲ್ಲಿ ಇಲ್ಲ. ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುವುದಿಲ್ಲ. ಪಕ್ಷದಲ್ಲಿ ಎಲ್ಲ ರೀತಿಯಲ್ಲೂ ಅಧಿಕಾರ ಅನುಭವಿಸಿ ಹೊರಗೆ ಹೋಗಿದ್ದಾರೆ. ಅಂತಹವರಿಗೆ ಏಕೆ ಮತ್ತೆ ಅವಕಾಶ ನೀಡಬೇಕು? ಎಂದು ಪ್ರಶ್ನಿಸಿದರು. ವಾಪಸ್ ಬರುವುದಕ್ಕೆ ನಮ್ಮ ವಿರೋಧ ಇದೆ. ಒಂದು ವೇಳೆ ಜೆಡಿಎಸ್ ಸೇರಲು ಬಯಸಿದರೆ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕಗಳು ಸೇರಿದಂತೆ ವಿವಿಧ ಘಟಕಗಳನ್ನು ಪುನರ್ ರಚನೆ ಮಾಡಲಾಗುವುದು. ಸಕ್ರಿಯವಾಗಿ ಕೆಲಸ ಮಾಡುತ್ತಿರುವವರನ್ನು ಉಳಿಸಿಕೊಂಡು ಉಳಿದವರನ್ನು ಬದಲಾವಣೆ ಮಾಡಲಾಗುವುದು. ಸಮರ್ಥರನ್ನು ನೇಮಿಸಲಾಗುವುದು. ತಳ ಮಟ್ಟದಿಂದ ಪಕ್ಷ ಸಂಘಟಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸಬೇಕಿದ್ದು, ಈಗಿನಿಂದಲೇ ಪಕ್ಷ ಬಲಪಡಿಸಲಾಗುವುದು. ಜಿಲ್ಲೆಯಲ್ಲಿ ಜೆಡಿಎಸ್ ಸಮರ್ಥವಾಗಿದ್ದು, ಗಟ್ಟಿಯಾದ ಕಾರ್ಯಕರ್ತರ ಪಡೆ ಇದೆ. ಅವರಿಗೆ ಮತ್ತಷ್ಟು ಶಕ್ತಿ ತುಂಬಿ ಪಕ್ಷ ಸಂಘಟನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
‘ಜನರೊಂದಿಗೆ ಜನತಾ ದಳ’ ಕಾರ್ಯಕ್ರಮ ಫೆ. 21ರಂದು ತಾಲ್ಲೂಕಿನ ನಾಗವಲ್ಲಿಯಲ್ಲಿ ನಡೆಯಲಿದ್ದು, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದರು.
ಅಧಿಕಾರ ಹಸ್ತಾಂತರಿಸಿದ ಮಾಜಿ ಅಧ್ಯಕ್ಷ ಆರ್.ಸಿ.ಆಂಜನಪ್ಪ, ‘ಜನರೊಂದಿಗೆ ಜನತಾ ದಳ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಉಳಿದಿರುವ ತಿಪಟೂರು, ಗ್ರಾಮಾಂತರ, ತುಮಕೂರು ನಗರ ಕ್ಷೇತ್ರದಲ್ಲೂ ಇದು ನಡೆಯಲಿದೆ’ ಎಂದು ಹೇಳಿದರು.
ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್, ಮುಖಂಡರಾದ ಎಸ್.ಆರ್.ಗೌಡ, ನರಸಿಂಹರಾಜು, ಉಗ್ರೇಶ್, ಗುಬ್ಬಿ ನಾಗರಾಜ್, ಗಂಗಣ್ಣ, ಕುಸುಮಾ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.