ADVERTISEMENT

ತುಮಕೂರು: ಗೌಡರ ಅಂಗಳಕ್ಕೆ ಜೆಡಿಎಸ್‌ ಗೊಂದಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 3:46 IST
Last Updated 16 ಜುಲೈ 2021, 3:46 IST

ತುಮಕೂರು: ಜಿಲ್ಲೆಯ ಜೆಡಿಎಸ್‌ ವಲಯದಲ್ಲಿ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಿ, ಕಾರ್ಯಕರ್ತರಲ್ಲಿ ಮೂಡಿರುವ ಆತಂಕವನ್ನುದೂರ ಮಾಡುವಂತೆ ಪಕ್ಷದ ವರಿಷ್ಠರಿಗೆ ಜಿಲ್ಲೆಯ ಮುಖಂಡರು ಮನವಿ ಮಾಡಿದ್ದಾರೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಪಕ್ಷದ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಬುಧವಾರ ಭೇಟಿಮಾಡಿದ ಪ್ರಮುಖರು, ಜಿಲ್ಲೆಯಲ್ಲಿ ಉಂಟಾಗಿರುವ ಗೊಂದಲಗಳಿಗೆ ಶೀಘ್ರ ತೆರೆ ಎಳೆಯುವಂತೆ ಕೇಳಿಕೊಂಡಿದ್ದಾರೆ.

ಪ್ರಮುಖವಾಗಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ವಿಚಾರ ಚರ್ಚೆಯಾಗಿದೆ. ಗುಬ್ಬಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿರುವುದು, ‘ನಾನು ಪಕ್ಷಾಂತರ ಮಾಡುವುದಿಲ್ಲ. ಜೆಡಿಎಸ್‌ನಲ್ಲೇ ಇರುತ್ತೇನೆ’ ಎಂದು ಶ್ರೀನಿವಾಸ್ ಪ್ರತಿಹೇಳಿಕೆ ನೀಡಿರುವುದು ಕಾರ್ಯಕರ್ತರ ನಡುವೆ ಸಾಕಷ್ಟು ಗೊಂದಲಗಳನ್ನು ಹುಟ್ಟು
ಹಾಕಿದೆ.

ADVERTISEMENT

ಶ್ರೀನಿವಾಸ್ ಸಚಿವ ಸ್ಥಾನದಿಂದ ಕೆಳಗೆ ಇಳಿದ ನಂತರ ಪಕ್ಷದ ಚಟುವಟಿಕೆ, ಸಂಘಟನೆಯಲ್ಲಿ ತೊಡಗಿಸಿಕೊಂಡಿಲ್ಲ. ಪಕ್ಷ ಹಾಗೂ ಮುಖಂಡರಿಂದ ಅಂತರ ಕಾಯ್ದುಕೊಂಡಿದ್ದಾರೆ. ಶಿರಾ ಉಪಚುನಾವಣೆ ಸಮಯದಲ್ಲಿ ದೇವೇಗೌಡ ಅವರೇ ಕರೆಸಿ ಮಾತನಾಡಿ, ಕೆಲವು ಜವಾಬ್ದಾರಿ ವಹಿಸಿದರೂ ಸರಿಯಾಗಿ ಸ್ಪಂದಿಸಿಲ್ಲ. ನಂತರ ಈ ಅಂತರ ಮತ್ತಷ್ಟು ಹೆಚ್ಚಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಪಕ್ಷ ಬಿಡಬಹುದು. ಜೆಡಿಎಸ್‌ನಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಪಕ್ಷ ಬಿಡುವುದಿಲ್ಲ ಎಂದು ವಾಸು ಹೇಳುತ್ತಲೇ ಬಂದಿದ್ದಾರೆ.

ಚುನಾವಣೆ– ಗೊಂದಲ: ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಾಗಲಿದ್ದು, ಅದಕ್ಕೂ ಮೊದಲು ಗೊಂದಲಗಳನ್ನು ನಿವಾರಿಸಿ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಕೇಳಿಕೊಂಡಿದ್ದಾರೆ. ‘ಶ್ರೀನಿವಾಸ್ ಅವರಿಗೆ ಕೆಲವು ವಿಚಾರಗಳಲ್ಲಿ ಅಸಮಾಧಾನವಾಗಿರಬಹುದು. ಅವರನ್ನು ಕರೆದು ಚರ್ಚಿಸಿ ಸರಿಪಡಿಸಲಾಗುವುದು. ಭಿನ್ನಾಭಿಪ್ರಾಯ ಬರುವುದು ಸಹಜ, ಅದನ್ನು ಬಗೆಹರಿಸಲಾಗುವುದು. ಮಾತುಕತೆ ನಡೆಸುವುದರಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ’ ಎಂದು ವರಿಷ್ಠರು ಅಭಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸೋಮವಾರ ಈ ಸಂಬಂಧ ಜಿಲ್ಲೆಯ ಪ್ರಮುಖರ ಸಭೆ ಕರೆಯಲಾಗಿದೆ. ಶಾಸಕರು, ಮಾಜಿ ಶಾಸಕರು, ಪ್ರತಿ ತಾಲ್ಲೂಕಿನಿಂದ ಐವರು ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ವಿಚಾರಗಳು ಚರ್ಚೆಯಾಗಲಿವೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ನಡೆಸುವ ಬಗ್ಗೆಯೂ ಪ್ರಸ್ತಾಪವಾಗಲಿದೆ.

ಅಧ್ಯಕ್ಷರ ಬದಲಾವಣೆ: ತಾಲ್ಲೂಕು ಘಟಕಗಳ ಅಧ್ಯಕ್ಷರ ಬದಲಾವಣೆಗೆ ವರಿಷ್ಠರು ಚಾಲನೆ ನೀಡಿದ್ದು, ಹೊಸದಾಗಿ ಅಧ್ಯಕ್ಷರ ನೇಮಕ ಸಂಬಂಧ ವೀಕ್ಷಕರನ್ನು ನೇಮಿಸಲಾಗಿದ್ದು, ಅವರು ವರದಿ ನೀಡಿದ್ದಾರೆ. ತುಮಕೂರು ಗ್ರಾಮಾಂತರ, ಮಧುಗಿರಿ, ತಿಪಟೂರು, ಕುಣಿಗಲ್ ಘಟಕಗಳಿಗೆ ಈ ವಾರದಲ್ಲೇ ನೂತನ ಅಧ್ಯಕ್ಷರ ಹೆಸರು ಪ್ರಕಟವಾಗಲಿದೆ. ಉಳಿದ ತಾಲ್ಲೂಕುಗಳಿಗೆ ವೀಕ್ಷಕರು ವರದಿ ನೀಡಿದ ನಂತರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎನ್ನಲಾಗಿದೆ.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡರೆ ಮುಂಬರುವ ವಿಧಾನಸಭೆ ಚುನಾವಣೆಗೆ ನೆರವಾಗಲಿದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಆರಂಭಿಸುವಂತೆ ಜಿಲ್ಲೆಯ ಪ್ರಮುಖರಿಗೆ ದೊಡ್ಡಗೌಡರು ನಿರ್ದೇಶನ ನೀಡಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನು ಎರಡು ವರ್ಷಗಳಿದ್ದು, ಈಗಿನಿಂದಲೇ ಕೆಲಸ ಮಾಡುವಂತೆ ಸಲಹೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.