
ತುಮಕೂರು: ಜೆಡಿಎಸ್ ಜಿಲ್ಲಾ ಘಟಕದ ನೂತನ ಸಾರಥಿಗಾಗಿ ದಳಪತಿಗಳು ಹುಡುಕಾಟ ನಡೆಸಿದ್ದು, ಮಾಜಿ ಶಾಸಕ ಎಚ್.ನಿಂಗಪ್ಪ ತೆನೆ ಹೊರಲು ಸಜ್ಜಾಗಿದ್ದಾರೆ. ಮಕರ ಸಂಕ್ರಾಂತಿ ವೇಳೆಗೆ ಹೊಸ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಗಳಿವೆ.
ರಾಜ್ಯದ ಎಲ್ಲ ಜಿಲ್ಲೆಗಳ ಅಧ್ಯಕ್ಷರನ್ನು ಬದಲಾವಣೆ ಮಾಡಿ, ಮುಂಬರುವ ಮಹಾನಗರ ಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಪ್ರಯತ್ನಕ್ಕೆ ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಅದರ ಭಾಗವಾಗಿ ಜಿಲ್ಲೆಯ ಅಧ್ಯಕ್ಷರ ಬದಲಾವಣೆ ಮಾಡಲಾಗುತ್ತಿದೆ.
ಜಿಲ್ಲೆಯ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಮುಖಂಡರ ಜತೆಗೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ. ಎಲ್ಲರೂ ಎಚ್.ನಿಂಗಪ್ಪ ಹೆಸರು ಪ್ರಸ್ತಾಪ ಮಾಡಿದ್ದಾರೆ. ನಿಂಗಪ್ಪ ಜತೆಗೂ ಮುಖಂಡರು ಚರ್ಚೆ ನಡೆಸಿದ್ದಾರೆ.
‘ಈಗಾಗಲೇ ರಾಜಕೀಯ ಚಟುವಟಿಕೆಗಳಿಂದ ದೂರ ಸರಿದಿದ್ದೇನೆ. ಮತ್ತೆ ಸಕ್ರಿಯವಾಗುವುದು ಕಷ್ಟಕರ’ ಎಂಬ ವಿಚಾರವನ್ನು ವರಿಷ್ಠರ ಗಮನಕ್ಕೆ ನಿಂಗಪ್ಪ ತಂದಿದ್ದಾರೆ. ಆದರೆ ಜಿಲ್ಲೆಯ ಎಲ್ಲ ನಾಯಕರು ನಿಂಗಪ್ಪ ಪರವಾಗಿ ಒಲವು ವ್ಯಕ್ತಪಡಿಸಿದ್ದು, ಅದಕ್ಕೆ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಸೇರಿ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಕ್ರಾಂತಿ ವೇಳೆಗೆ ಇಲ್ಲವೆ ಹಬ್ಬದ ನಂತರ ನೇಮಕಾತಿ ಆದೇಶ ಹೊರ ಬೀಳಲಿದ್ದು, ಇನ್ನು ಒಂದೆರಡು ವಾರದಲ್ಲಿ ಹೊಸ ಅಧ್ಯಕ್ಷರು ಪಕ್ಷವನ್ನು ಮುನ್ನಡೆಸಲಿದ್ದಾರೆ.
ನಿಂಗಪ್ಪ ಹಿನ್ನೆಲೆ: ಜೆಡಿಎಸ್‌ನಿಂದಲೇ ನಿಂಗಪ್ಪ ರಾಜಕೀಯವಾಗಿ ನೆಲೆ ಕಂಡುಕೊಂಡವರು. 2003ರಿಂದ ಸತತವಾಗಿ ಹತ್ತು ವರ್ಷಗಳ ಕಾಲ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಿದ್ದರು. ಕುಣಿಗಲ್ ಕ್ಷೇತ್ರದಿಂದ 2004ರಲ್ಲಿ (ಆಗ ಹೆಬ್ಬೂರು, ಗೂಳೂರು ಭಾಗ ಕುಣಿಗಲ್ ಕ್ಷೇತ್ರಕ್ಕೆ ಸೇರಿತ್ತು) ಒಮ್ಮೆ ಶಾಸಕರಾಗಿ ಆಯ್ಕೆ ಆಗಿದ್ದರು. ನಂತರ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.
2013ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್ ಸಿಗದೆ ಕೆಜೆಪಿಯಿಂದ ಸ್ಪರ್ಧಿಸಿದ್ದರು. ಕೆಜೆಪಿ, ಬಿಜೆಪಿ ವಿಲೀನದ ನಂತರ ಕಾಂಗ್ರೆಸ್ ಸೇರಿದ್ದರು. 2023ರಲ್ಲಿ ಕಾಂಗ್ರೆಸ್‌ನಿಂದ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿದ್ದರು. ಟಿಕೆಟ್ ಸಿಗುವ ಭರವಸೆಯೂ ಸಿಕ್ಕಿತ್ತು. ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದರು. ಕಾಂಗ್ರೆಸ್ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಕಳೆದ ಲೋಕಸಭೆ ಚುನಾವಣೆ ಹೊತ್ತಿಗೆ ಜೆಡಿಎಸ್‌ಗೆ ಮರಳಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದರು. ಈಗ ಸಕ್ರಿಯ ರಾಜಕಾರಣಕ್ಕೆ ಮರಳಿ ಮತ್ತೊಮ್ಮೆ ಪಕ್ಷವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಮುಂದಾಗಿದ್ದಾರೆ.
ಆಂಜನಪ್ಪ 8 ವರ್ಷ ಅಧಿಕಾರ
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆರ್.ಸಿ.ಆಂಜನಪ್ಪ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ರೀತಿಯಲ್ಲೂ ಗೊಂದಲ ಮೂಡಿಸದೆ ವಿವಾದ ಸೃಷ್ಟಿಸದೆ ಪಕ್ಷ ಮುನ್ನಡೆಸಿದ್ದರು. ‘ಪಕ್ಷ ಸಂಘಟನೆಯಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿಲ್ಲ. ಜೆಡಿಎಸ್ ವರಿಷ್ಠರು ಹೇಳಿದ ಕೆಲಸ ಮಾಡಿಕೊಂಡು ಸುಮ್ಮನಾಗುತ್ತಾರೆ. ನಾಯಕರು ಕರೆದ ಸಭೆ ಹಾಗೂ ಇತರೆಡೆಗಳಿಗೆ ಹೋಗಿ ಬರುತ್ತಾರೆ. ತಾವಾಗಿಯೇ ಆಸಕ್ತಿ ತೆಗೆದುಕೊಂಡು ಪಕ್ಷ ಸಂಘಟಿಸಲಿಲ್ಲ. ರಾಜಕೀಯ ವಿಚಾರಗಳಿದ್ದರೂ ವಿರೋಧ ಪಕ್ಷದವರ ಜತೆಗೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ’ ಎಂಬ ಮಾತುಗಳು ಪಕ್ಷದ ವಲಯದಿಂದ ಕೇಳಿ ಬಂದಿದ್ದವು. ಪಕ್ಷ ಹಾಗೂ ಪಕ್ಷದ ಮುಖಂಡರನ್ನು ಮುಜುಗರ ಅಥವಾ ಗೊಂದಲಕ್ಕೆ ಸಿಲುಕಿಸುವ ಪ್ರಯತ್ನ ಮಾಡಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಆದರೆ ಪಕ್ಷ ಸಂಘಟನೆ ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.